ಅಕ್ರಮ ಕಟ್ಟಡ ತೆರವಿಗೆ 15 ದಿನಗಳ ಗಡುವು

ಸೇಡಂ: ನಗರದ ಅಕ್ರಮ ಕಟ್ಟಡಗಳು ಹಾಗೂ ರಸ್ತೆ ಒತ್ತುವರಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ವತಿಯಿಂದ ಸೇಡಂ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಅಧಿಕಾರಿಗಳ ಭರವಸೆ ಮೇರೆಗೆ 15 ದಿನಗಳ ಗಡುವಿನೊಂದಿಗೆ ತಾತ್ಕಾಲಿಕವಾಗಿ ಕೈಬಿಡಲಾಯಿತು.
ಧರಣಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಿಜನಳ್ಳಿ, ನಗರಸಭೆ ಅಧಿಕಾರಿಗಳು ಕೆಲ ದಿನಗಳ ಹಿಂದೆ ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಆದರೆ ರಸ್ತೆ ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡ ನಿರ್ಮಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದವರೆಗೆ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.
ಧರಣಿ ಸ್ಥಳಕ್ಕೆ ಸಹಾಯಕ ಆಯುಕ್ತ ಪ್ರಭುರಡ್ಡಿ ಹಾಗೂ ಪೌರಾಯುಕ್ತ ಶರಣಯ್ಯಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಮನವಿಪತ್ರ ಸ್ವೀಕರಿಸಿ, ಸಮಸ್ಯೆಯನ್ನು ಪರಿಶೀಲಿಸಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳು 15 ದಿನಗಳ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು. ಗಡುವಿನೊಳಗೆ ಅಕ್ರಮ ಕಟ್ಟಡ ಹಾಗೂ ರಸ್ತೆ ಒತ್ತುವರಿ ತೆರವುಗೊಳಿಸದಿದ್ದರೆ ಮುಂದಿನ ಹಂತದ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಧರಣಿಯಲ್ಲಿ ಶಿವಪುತ್ರಪ್ಪ ಮೊಘಾ, ಶ್ರೀಶೈಲ ಎಂ.ಜಿ., ರಾಮು ಕಣೇಕಲ್, ಅಶೋಕ ರನ್ನೇಟಾಳ, ಲೋಕೇಶ, ಕಾಶೀನಾಥ ದೇವನೂರ, ಗುರುನಾಥ ಕೊಡಾಳ, ಲೋಕೇಶ ಹಂದರಕಿ, ಭೀಮಾಶಂಕರ ಕೊರವಿ, ಮುತ್ತು ಹಾಗೂ ಸಾರಥಿ ಸೇರಿದಂತೆ ಹಲವರು ಭಾಗವಹಿಸಿದ್ದರು.



