ಕನ್ನಡದ ಶ್ರೀಮಂತ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ
ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ: 36 ಮಂದಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ: “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಭಾವನೆಯೊಂದಿಗೆ ಕನ್ನಡ ಭಾಷೆ, ನಾಡು ಮತ್ತು ನುಡಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಅಲ್ಲಮ ಪ್ರಭು ಸಂಸ್ಥಾನ ಮಠ, ತೋನಸನಹಳ್ಳಿ ಧರ್ಮರತ್ನ ಪೂಜ್ಯ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮೀಜಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜೈ ಕರುನಾಡು ಜನಪರ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಹೋರಾಟ, ಸಾಮಾಜಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 36 ಮಂದಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ವೈಭವ ಮತ್ತು ಕನ್ನಡಿಗರ ಹೆಮ್ಮೆಯ ಕುರಿತು ವಿವರಿಸಿದರು.
ಕನ್ನಡಕ್ಕೆ ಸುಮಾರು 2,500 ವರ್ಷಗಳಷ್ಟು ಪ್ರಾಚೀನ ಇತಿಹಾಸವಿದ್ದು, ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಕನ್ನಡಿಗರಾಗಿ ಹುಟ್ಟಿರುವುದು ಹಾಗೂ ಕನ್ನಡ ಭಾಷೆಯನ್ನು ಬಳಸುತ್ತಿರುವುದು ಹೆಮ್ಮೆಯ ಸಂಗತಿ. ಕುವೆಂಪು, ನಿಸಾರ್ ಅಹಮದ್, ಬಸವಣ್ಣ, ಶರೀಫರು ಸೇರಿದಂತೆ ಅನೇಕ ಕವಿಗಳು, ಸಾಹಿತಿಗಳು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಶ್ರೀಮಂತ ಪರಂಪರೆ ಇದ್ದು, ಭಾಷೆ, ಜಾತಿ ಹಾಗೂ ಧರ್ಮದ ಎಲ್ಲ ಮಿತಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಕನ್ನಡಕ್ಕಿದೆ ಎಂದು ಅವರು ಹೇಳಿದರು.
ಸಾಧಕರನ್ನು ಗುರುತಿಸುವುದು ಸಮಾಜಕ್ಕೆ ಪ್ರೇರಣೆ
ಸಮಾಜಕ್ಕಾಗಿ ಹಾಗೂ ದೇಶಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಮಹಾಲಕ್ಷ್ಮಿ ಶಕ್ತಿ ಪೀಠ, ಶ್ರೀನಿವಾಸ ಸರಡಗಿಯ ಪರಮಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ಹೇಳಿದರು.
ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಜೈ ಕರ್ನಾಟಕ ಜನಪರ ಸಮಿತಿಯ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ್ ಅವರು ಅವರಲ್ಲಿ ಮತ್ತಷ್ಟು ಸಮಾಜಮುಖಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗುತ್ತವೆ ಎಂದು ಅವರು ಪ್ರಶಂಸಿಸಿದರು.
ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಕೆಲಸ
ಮಣೂರು ಆಸ್ಪತ್ರೆಯ ನಿರ್ದೇಶಕ ಡಾ. ಫಾರೂಕ್ ಅಹ್ಮದ್ ಮಣೂರ್ ಮಾತನಾಡಿ, ಸಿದ್ದು ಜಮಾದಾರ್ ಅವರು ವಿವಿಧ ಜಾತಿ, ಧರ್ಮ ಹಾಗೂ ವರ್ಗದ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಕನ್ನಡಪರ ಹೋರಾಟದ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆಯೂ ಸಂಘಟನೆಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ಭಾಗವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ನಿರುದ್ಯೋಗ, ಕುಡಿಯುವ ನೀರು, ರೈತರ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕಾಗಿ ಸಂಘಟನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ದು ಜಮಾದಾರ್ ಕಾರ್ಯಕ್ಕೆ ಮೆಚ್ಚುಗೆ
ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಲಚ್ಚಪ್ಪ ಜಮಾದಾರ್ ಮಾತನಾಡಿ, ಕನ್ನಡಾಂಬೆಯ ಸೇವೆಯ ಜೊತೆಗೆ ಸಿದ್ದು (ಗೌತಮ) ಜಮಾದಾರ್ ಅವರು ನಿರಂತರವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜೈ ಕರುನಾಡು ಜನಪರ ಸಮಿತಿಯ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಾನಂದ ಆರ್. ಹೋನಗುಂಟಿ, ಸಂತೋಷ ಎಸ್. ಬೆಣ್ಣೂರು, ಮಲ್ಲಿಕಾರ್ಜುನ ವಾಲಿಕಾರ, ಶಿವಲಿಂಗ ಹಳಿಮನಿ, ಸಂದೀಪ್ ಭರಣಿ, ರವಿ ದೇಗಾಂವ, ಶಿವಕುಮಾರ್ ಎಂ. ಮುಡ್ಡಿ, ಅಂಬಾಜಿ ಪಿ. ಮೇಟಿ, ನಾಗೇಶ್ ಸಿ. ವಡಗೇರಿ, ಶಿವಾನಂದ ಉಪ್ಪಿನ್ ಸಾಹುಕಾರ್, ಬಸಲಿಂಗಪ್ಪ ಖಾನಾಪೂರ್, ಸುಭಾಸಚಂದ್ರ ದುಕಾನದಾರ, ಎಂ.ಎ. ಸಿದ್ದಿಕ್, ರಾಜೇಶ್ ಬಿ. ಹಡಗಿಲ್ಕರ್, ಶರಣು ಜಮಾದಾರ್, ಆನಂದ ಕದ್ದರಗಿ, ಗೌತಮ್ ಸಂಗೋಳಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೋರಾಟ, ಸಾಮಾಜಿಕ ಸೇವೆ ಹಾಗೂ ಸಮಾಜಮುಖಿ ಸಾಧನೆ ಮಾಡಿದ 36 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೈ ಕರುನಾಡು ಜನಪರ ಸಮಿತಿಯ ಕಾರ್ಯಕರ್ತರು, ಕನ್ನಡಾಭಿಮಾನಿಗಳು, ಹೋರಾಟಗಾರರು, ವೈದ್ಯರು, ರೈತರು ಹಾಗೂ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದು, ಸನ್ಮಾನ ಸಮಾರಂಭಕ್ಕೆ ಮೆರುಗು ತಂದರು.



