ಕಲಬುರಗಿಜಿಲ್ಲೆ ಸುದ್ದಿ

ಬಸವ ತತ್ವ ಸಾರುವ ಚಿಂತನೆಗೆ ಡಾ. ಚೆನ್ನವೀರ ಶಿವಾಚಾರ್ಯರ ಕೊಡುಗೆ

ಕಲ್ಯಾಣ ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ: ವಿಜಯಕುಮಾರ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಶ್ರೀಮಠದ ಡಾ. ಚೆನ್ನವೀರ ಶಿವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ರಾಜ್ಯಮಟ್ಟದ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಚೆನ್ನವೀರ ಶಿವಾಚಾರ್ಯರನ್ನು ವಿಶೇಷವಾಗಿ ಗೌರವಿಸಿ ಅವರು ಮಾತನಾಡಿದರು.

ಬಸವಾದಿ ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವಲ್ಲಿ ಡಾ. ಚೆನ್ನವೀರ ಶಿವಾಚಾರ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಶರಣರ ಆಶಯದಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ಸಾಹಿತ್ಯಿಕ ಚಿಂತನೆ ಅವರ ಶ್ರೀಮಠದ ಪರಂಪರೆಯಾಗಿದೆ ಎಂದು ಹೇಳಿದರು.

ನೂರಾರು ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾಡು-ನುಡಿ, ನೆಲ-ಜಲ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ, ಮುಡಬಿ ಗುಂಡೇರಾವ್, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಡಾ. ಬಾಬುರಾವ ಶೇರಿಕಾರ, ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಜಗದೀಶ ಮರಪಳ್ಳಿ, ಬಿ.ಎಂ. ಪಾಟೀಲ ಕಲ್ಲೂರ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ, ಸೋಮಶೇಖರಯ್ಯ ಹೊಸಮಠ, ಸೋಮಶೇಖರ ನಂದಿಧ್ವಜ, ಮಹಾಲಿಂಗಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button