ವಿಕಾಸಶೀಲ ಇನ್ಸಾನ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಶಾಂತಪ್ಪ ಕೂಡಿ ನೇಮಕ

ಕಲಬುರಗಿ: ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಮುಖೇಶ್ ಸಹಾನಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ವಿಕಾಸಶೀಲ ಇನ್ಸಾನ್ ಪಕ್ಷವು ಕರ್ನಾಟಕದಲ್ಲಿ ಸಂಘಟನೆಯನ್ನು ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ.ಕೆ. ಮೋಹನ್ ಕುಮಾರ್ ಅವರನ್ನು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ರಾಜ್ಯದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಲಾಗಿದೆ.
ಕೋಲಿ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪಕ್ಷವನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಕೋಲಿ ಸಮಾಜದ ಹಿರಿಯ ನಾಯಕ ಹಾಗೂ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಶಾಂತಪ್ಪ ಕೂಡಿ ಅವರನ್ನು ವಿಕಾಸಶೀಲ ಇನ್ಸಾನ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ನೇಮಕ ಹಿನ್ನೆಲೆಯಲ್ಲಿ ಅಂಬಿಗರ ಚೌಡಯ್ಯನವರ ಯುವಕ ಸಂಘ, ಗಂಗಾನಗರದ ಪದಾಧಿಕಾರಿಗಳು ಹಾಗೂ ಯುವಕರು ಶಾಂತಪ್ಪ ಕೂಡಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಪಕ್ಷ ಸಂಘಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೂಡಿ, ಉಪಾಧ್ಯಕ್ಷ ರವಿ ಬೊಮ್ಮನಹಳ್ಳಿ, ಶರಣು ಮೇಲಕುಂದಿ, ಪಿರು ಪೂಜಾರಿ, ಶರಣು, ಮಹೇಶ್, ಸುರೇಶ್ ಕೂಡಿ, ಸಂತು ಹುಲಿಗೇರಿ, ಶಾಮ್ ಕೋಬಾಳ, ಕುಮಾರ್, ಮಣಿಕಂಠ, ಅನಿಲ್ ಕೂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ, ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಸಂಘಟನೆಯನ್ನು ಬೆಳೆಸಲು ಎಲ್ಲರೂ ಕೈಜೋಡಿಸುವುದಾಗಿ ಯುವಕರು ತಿಳಿಸಿದರು.
ಈ ಕುರಿತು ಅಂಬಿಗರ ಚೌಡಯ್ಯನವರ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ ಬಟಗೇರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



