ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಎಚ್ಒ ದಿಢೀರ್ ಭೇಟಿ

ಕೆಂಭಾವಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ. ಮಹೇಶ್ ಬಿರಾದಾರ್ ಅವರು ಬುಧವಾರ ರಾತ್ರಿ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಕಾರ್ಯನಿರ್ವಹಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಕರ್ತವ್ಯದ ಅವಧಿಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹಾಜರಿದ್ದು, ಸಮಯಪಾಲನೆ ಮಾಡಬೇಕು. ಕರ್ತವ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯ ಔಷಧಾಲಯದ ದಾಸ್ತಾನು ಪರಿಶೀಲಿಸಿದ ಡಿಎಚ್ಒ, ಸರ್ಕಾರದಿಂದ ಪೂರೈಕೆಯಾಗುವ ಅಗತ್ಯ ಹಾಗೂ ತುರ್ತು ಔಷಧಿಗಳನ್ನು ರೋಗಿಗಳಿಗೆ ಸಕಾಲದಲ್ಲಿ ಉಚಿತವಾಗಿ ವಿತರಿಸಬೇಕು. ಅನಗತ್ಯವಾಗಿ ಹೊರಗಿನಿಂದ ಔಷಧಿ ಖರೀದಿಸುವಂತೆ ರೋಗಿಗಳಿಗೆ ಸೂಚಿಸಬಾರದು ಎಂದು ತಾಕೀತು ಮಾಡಿದರು.
‘ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಹಾಗೂ ಗ್ರಾಮೀಣ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವುದು ಅತ್ಯಗತ್ಯ. ರೋಗಿಗಳಿಗೆ ಸ್ಪಂದಿಸುವಲ್ಲಿ ಸಿಬ್ಬಂದಿ ಕರ್ತವ್ಯಲೋಪ ಅಥವಾ ಅಶಿಸ್ತು ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಡಾ. ಮಹೇಶ್ ಬಿರಾದಾರ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಯುವ ಮುಖಂಡರಾದ ಜುಮ್ಮಣ್ಣ ಕಟ್ಟಿಮನಿ ಹಾಗೂ ಭೀಮು ಮಳಕೇರಿ ಅವರು ಆಸ್ಪತ್ರೆಯ ಪ್ರಮುಖ ಸಮಸ್ಯೆಗಳು, ಮೂಲಸೌಕರ್ಯ ಕೊರತೆ ಹಾಗೂ ಸಿಬ್ಬಂದಿ ಕೊರತೆಯ ಕುರಿತು ಡಿಎಚ್ಒ ಅವರ ಗಮನಕ್ಕೆ ತಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಬನ್ನೆಪ್ಪ, ಡಾ. ಚನ್ನಬಸಪ್ಪ ಚಿಂಚೋಳಿ, ಡಾ. ನ್ಯಾಮಗೊಂಡ ಹಾಗೂ ಆರೋಗ್ಯ ಸಿಬ್ಬಂದಿಗಳಾದ ಮಂಜುಳಾ, ಲಕ್ಷ್ಮಣ, ದೇವಪ್ಪ, ತಜಮುಲ್, ಮಲ್ಲು, ಗುರು, ಸಂಗೀತಾ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.



