ಜಾತಿ ಅಳಿಸಿ ಸಾಮರಸ್ಯ ಬೆಳೆಸುವುದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯ: ಸಾಹಿತಿ ಧರ್ಮಣ್ಣ ಎಚ್. ಧನ್ನಿ

ಕಲಬುರಗಿ: ಸಮಾಜದಲ್ಲಿ ಜಾತಿ ತಾರತಮ್ಯ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಜ್ಞಾವಂತರು ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸುವ ಮೂಲಕ ಸಾಮಾಜಿಕ ಸಾಮರಸ್ಯ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಧರ್ಮಣ್ಣ ಎಚ್. ಧನ್ನಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಛತ್ರಪತಿ ಸಾಹು ಮಹಾರಾಜರ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕೊಲ್ಹಾಪುರದ ಛತ್ರಪತಿ ಸಾಹು ಮಹಾರಾಜರು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಮೀಸಲಾತಿಯ ಜನಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಛತ್ರಪತಿ ಸಾಹು ಮಹಾರಾಜರ ಸಾಮಾಜಿಕ ನ್ಯಾಯದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಆದರೆ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಜಾತಿ, ಅಸಮಾನತೆ ಮತ್ತು ತಾರತಮ್ಯ ತೊಲಗಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆ ನಿರ್ಮೂಲನೆ, ದೇವದಾಸಿ ಪದ್ಧತಿ ನಿಷೇಧ ಸೇರಿದಂತೆ ಹಲವು ಪ್ರಗತಿಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು. ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಮುನ್ನಡೆಗೆ ಶ್ರಮಿಸಬೇಕು ಎಂದು ಹೇಳಿದರು.
ಕರ್ನಾಟಕ ಸರ್ಕಾರಿ ನೌಕರರ ಸಂಘದ ಬೆಂಗಳೂರು ಜಿಲ್ಲಾ ಘಟಕದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷೆ ಹಾಗೂ ರಾಜ್ಯ ಉಪಾಧ್ಯಕ್ಷೆ ನಂದಿನಿ ಸನಬಾಲ್ ಮಾತನಾಡಿದರು.
ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವಕುಮಾರ ಟಿ. ಮಾಲೆ ಅಧ್ಯಕ್ಷತೆ ವಹಿಸಿದ್ದರು. ಬಹುಜನ ನಾಯಕರ ತತ್ವಾದರ್ಶಗಳನ್ನು ಇಂದಿನ ಶೋಷಿತ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಘಟನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಅನೀಲಕುಮಾರ ಎಸ್. ಕಾಂಬಳೆ, ರಾಜ್ಯ ಗೌರವಾಧ್ಯಕ್ಷ ಶಂಕರ ಪಿರಂಗಿ, ಶಿವಾನಂದ ಎಸ್. ಸಾಗರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ, ಗಾಯಕ ಸುಭಾಷ್ ಬನ್ನಟ್ಟಿ, ಸರ್ಕಾರಿ ಪ್ರೌಢಶಾಲೆ ಪಾಳಾ (ಬಿ)ಯ ಸಹ ಶಿಕ್ಷಕಿ ಡಾ. ಕಾವೇರಿ ಕುಡಂಪುರೆ, ಸಹ ಶಿಕ್ಷಕಿ ಗೀತಾ ಭರಣಿ, ಕೆಎಸ್‌ಎಸ್‌ಡಿ ಬೀದರ್ ಜಿಲ್ಲಾ ಅಧ್ಯಕ್ಷ ಅಂಬಾದಾಸ ಸೋನಿ, ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿ ವಿಜಯಲಕ್ಷ್ಮೀ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಜಿಲ್ಲಾ ಸಮತಾ ಸೈನಿಕ ದಳದ ಅಧ್ಯಕ್ಷ ಈರಣ್ಣ ಜಾನೆ, ಪ್ರಧಾನ ಕಾರ್ಯದರ್ಶಿ ಅಪ್ಪಾರಾವ್ ಭಾವಿಮನಿ, ಮಹಾದೇವ ನಾಟೀಕಾರ್, ವಿಜಯಕುಮಾರ ಮುದ್ದಾ ಸೇರಿದಂತೆ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಯೋನಿವೃತ್ತಿ ಹೊಂದಿದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.



