ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ: ಅಟ್ರಾಸಿಟಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ಗಡಿಪಾರಿಗೆ ಆಗ್ರಹ

ಕಲಬುರಗಿ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎನ್ನಲಾದ ಘಟನೆಯನ್ನು ಖಂಡಿಸಿ, ಕಲಬುರಗಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಭೀಮವಾದದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧ್ಯಕ್ಷ ಕೈಲಾಶ್ ದೊಡ್ಡಮನಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಘಟನೆ ಕುರಿತು ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಾತನಾಡಿದ ಕೈಲಾಶ್ ದೊಡ್ಡಮನಿ, ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳವನ್ನು ಗಂಗಾಜಲ ಮತ್ತು ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ ಎನ್ನಲಾದ ಘಟನೆ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನ ಮಾತ್ರವಲ್ಲ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕೃತ್ಯಗಳು ಸಮಾಜದಲ್ಲಿ ಅಸಮಾನತೆ ಹಾಗೂ ಜಾತೀಯ ಮನೋಭಾವವನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.
ನಗರ ಸಂಚಾಲಕ ಡಾ. ಕಾಶೀನಾಥ ಉಡಗಿ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕೂಡಲೇ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಗತ್ಯವಿದ್ದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.
ಪ್ರತಿಭಟನೆಯಲ್ಲಿ ಕೈಲಾಶ್ ದೊಡ್ಡಮನಿ, ಮಲ್ಲಿಕಾರ್ಜುನ ಬನಸೋಡೆ, ಶಿವಕುಮಾರ ಬಂಡಗೆ, ವಿಜಯಕುಮಾರ ಕೌಲಗಿ, ಮಹಾಂತೇಶ ಮಹಾಂತನೂರ, ಕಾಶೀನಾಥ ಉಡಗಿ, ಗುಂಡುರಾವ್ ಕಪನೂರ, ಅನುರಾಧಾ ಕಾಂಬಳೆ, ಸಿದ್ದಾರ್ಥ ಗಿರಿ, ಮಾರುತಿ ತೇಗಲತಿಪ್ಪಿ, ಅಮರನಾಥ ಪಟ್ನಾಯಕ್, ಮೇಘನಾಥ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



