ಜ್ಞಾನಜ್ಯೋತಿ ಶ್ರೀ ಶಂಕರಾನಂದ ಸರಸ್ವತಿ ಸ್ವಾಮೀಜಿಯ 48ನೇ ಪುಣ್ಯಾರಾಧನಾ ಮಹೋತ್ಸವ

ಜೇವರ್ಗಿ: ತಾಲ್ಲೂಕಿನ ಗಂವಾರಿ ಗ್ರಾಮದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದಲ್ಲಿ ಜ್ಞಾನಜ್ಯೋತಿ ಶ್ರೀ ಶಂಕರಾನಂದ ಸರಸ್ವತಿ ಸ್ವಾಮೀಜಿಯ 48ನೇ ಪುಣ್ಯಾರಾಧನಾ ಸಮಾರಂಭವು ಶ್ರೀ ಸೋಪಾನನಾಥ ಮಹಾ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಆರಂಭಗೊಂಡಿತು.
ಮಠದ ಸಭಾ ಮಂಟಪದಲ್ಲಿ ಆತ್ಮರಾಮ ಪಾಂಡುರಂಗ ಜೋಶಿ ಅವರು ಭಕ್ತರನ್ನುದ್ದೇಶಿಸಿ ಧರ್ಮಪ್ರವಚನ ನೀಡಿದರು. ಗುರು ತತ್ತ್ವದ ಅಗಾಧತೆಯನ್ನು ವಿವರಿಸಿದ ಅವರು, ‘ಗುರು ಎಂದರೆ ಅಂಧಕಾರವನ್ನು ನಿವಾರಿಸುವ ಜ್ಯೋತಿ’ ಎಂಬ ಸಂದೇಶವನ್ನು ಸಾರಿದರು.
ಸಂಸ್ಕೃತದ ಪ್ರಸಿದ್ಧ ಶ್ಲೋಕವನ್ನು ಉಲ್ಲೇಖಿಸಿದ ಅವರು, ‘ಗು’ ಎಂದರೆ ಅಜ್ಞಾನವೆಂಬ ಅಂಧಕಾರ ಹಾಗೂ ‘ರು’ ಎಂದರೆ ಅದನ್ನು ನಿವಾರಿಸುವ ಜ್ಯೋತಿ ಎಂದು ವಿವರಿಸಿದರು. ಜೀವನದಲ್ಲಿ ಅಜ್ಞಾನ ಮತ್ತು ಮಾಯೆಗೆ ಒಳಗಾಗುವ ಮನುಷ್ಯರು ಜ್ಞಾನಿಗಳಾದ ಮಹಾತ್ಮರನ್ನು ಗುರುಗಳನ್ನಾಗಿ ಸ್ವೀಕರಿಸಿ, ಅವರ ಕೃಪೆಗೆ ಪಾತ್ರರಾಗುವುದು ಅತ್ಯಂತ ಭಾಗ್ಯದ ಸಂಗತಿ ಎಂದರು.
ಗುರುಗಳು ನೀಡುವ ಪ್ರತಿಯೊಂದು ಉಪದೇಶ ಹಾಗೂ ಹಿತವಚನವನ್ನು ಮಂತ್ರದಂತೆ ಸ್ವೀಕರಿಸಬೇಕು. ಗುರುಗಳ ಪ್ರತಿಯೊಂದು ಆಜ್ಞೆಯೂ ಶಿಷ್ಯನ ಹಾಗೂ ಸಮಾಜದ ಉದ್ಧಾರ ಮತ್ತು ಶ್ರೇಯಸ್ಸಿಗಾಗಿಯೇ ಇರುತ್ತದೆ ಎಂದು ಅವರು ತಿಳಿಸಿದರು.
ಶ್ರೀಮಠದ ಪೀಠಾಧಿಪತಿ ಶ್ರೀ ಸೋಪಾನನಾಥ ಮಹಾ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಂಡುರಂಗ ಮಹಾರಾಜ, ಶ್ರೀಪಾದಭಟ್ ಜೋಶಿ, ಜಗುರಾಯ ಕುಲಕರ್ಣಿ, ರಮೇಶ ಕುಲಕರ್ಣಿ, ವಿದ್ಯಾವಿಹಾರಿ ಜೋಶಿ, ಶ್ರೀನಿವಾಸ ಕುಲಕರ್ಣಿ, ಲಕ್ಷ್ಮೀಕಾಂತ ಕುಲಕರ್ಣಿ, ಹೋತಿನಮಡು, ಸಂಜುಕುಮಾರ ಜೋಶಿ, ಉಮಾಕಾಂತ ಜೋಶಿ, ಚಂದ್ರಶೇಖರ ಬಿರಾದಾರ, ನವೀನ ಮೇಟಿ ಸೇರಿದಂತೆ ಮಠದ ಧಾರ್ಮಿಕ ಪ್ರಮುಖರು, ಗುರುಹಿರಿಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪೂಜ್ಯರ ಆಶೀರ್ವಾದ ಹಾಗೂ ಧರ್ಮಪ್ರವಚನದ ಅಮೃತವಾಣಿಯನ್ನು ಆಲಿಸಿದ ಭಕ್ತರು ಧನ್ಯತೆ ವ್ಯಕ್ತಪಡಿಸಿದರು.



