ನಾರಾಯಣ ಗುರು ಸಾಮಾಜಿಕ ಪರಿವರ್ತನೆಯ ಹರಿಕಾರ: ಕಾಶಿನಾಥ ಗುತ್ತೇದಾರ

ಚಿತ್ತಾಪುರ: ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಂದೇ ದೇವರು ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಅವರು ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಾಂಸ್ಕೃತಿಕ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲದ ಸಂದರ್ಭದಲ್ಲಿ ನಾರಾಯಣ ಗುರುಗಳು ಸ್ವತಃ ದೇವಾಲಯಗಳನ್ನು ನಿರ್ಮಿಸಿ ಎಲ್ಲರಿಗೂ ಪೂಜಾ ಹಕ್ಕು ದೊರೆಯುವಂತೆ ಮಾಡಿದರು. ಕೇರಳದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರ ಹಾಗೂ ಅನಾಚಾರಗಳ ವಿರುದ್ಧ ಮೌನ ಕ್ರಾಂತಿಯ ಮೂಲಕ ಹೋರಾಡಿದ ಅವರು, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪದ್ಮಣ್ಣ ರಾಸಣಗಿ ಮಾತನಾಡಿ, ನಾರಾಯಣ ಗುರುಗಳು ಭಾರತದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರು, ಎಲ್ಲರೂ ಸಮಾನರು ಎಂಬ ಸಂದೇಶದೊಂದಿಗೆ ಜನರಲ್ಲಿ ಸ್ವಾಭಿಮಾನ ಮೂಡಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಹಿಣಿ ಕಲ್ಮಠ, ಡಾ. ಜ್ಯೋತಿ ಕುಲಕರ್ಣಿ, ಡಾ. ವಿಲಾಸ್, ಡಾ. ನಾಗವೇಣಿ, ಭಾಗ್ಯಶ್ರೀ ಠಾಕೂರ್ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಘಟಕದ ಸಂಚಾಲಕ ಮಲ್ಲಪ್ಪ ಎಸ್. ತೊಟ್ನಳ್ಳಿ ಸ್ವಾಗತಿಸಿದರು. ಡಾ. ಸೂಗೂರೇಶ್ವರ ಪ್ರಾರ್ಥಿಸಿದರು. ಮರಿಯಪ್ಪ ಮೇತ್ರಿ ನಿರೂಪಿಸಿದರು. ಶರಣಪ್ಪ ದಿಗ್ಗಾಂವ ವಂದಿಸಿದರು.



