ಸಣ್ಣ ಸಮುದಾಯಗಳಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?
ಸರ್ಕಾರದ ವಿರುದ್ಧ ದೇವೇಂದ್ರ ದೇಸಾಯಿ ಆಕ್ರೋಶ

ಕಲಬುರಗಿ: ರಾಜ್ಯದ ಹಲವು ಸಣ್ಣ ಹಾಗೂ ಹಿಂದುಳಿದ ಸಮುದಾಯಗಳು ಇಂದಿಗೂ ಸಮರ್ಪಕ ಮೀಸಲಾತಿ, ಶೈಕ್ಷಣಿಕ ಅವಕಾಶ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ ಎಂದು ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲಬುರಗಿ ಆರೋಪಿಸಿದರು.
ಹೂಗಾರ, ಅಕ್ಕಸಾಲಿಗ, ವಿಶ್ವಕರ್ಮ, ಬಡಿಗ, ಕುಂಬಾರ, ಮಡಿವಾಳ, ನೇಕಾರ, ಹಟಗಾರ, ಹಡಪದ ಸೇರಿದಂತೆ ಹಲವು ಸಣ್ಣ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆ. ಆದರೆ, ಈ ಸಮುದಾಯಗಳಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಮತ್ತು ಅವಕಾಶಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದೊಡ್ಡ ಸಮುದಾಯಗಳಿಗೆ ವಿವಿಧ ರೀತಿಯ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿರುವ ಸಂದರ್ಭದಲ್ಲಿ, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಸಣ್ಣ ಸಮುದಾಯಗಳ ಸಮಸ್ಯೆಗಳಿಗೆ ಸರ್ಕಾರಗಳು ಏಕೆ ಸೂಕ್ತ ಗಮನ ನೀಡುತ್ತಿಲ್ಲ ಎಂಬುದು ಗಂಭೀರ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯದ ಹಕ್ಕು ನೀಡಿದೆ. ಆದ್ದರಿಂದ ಸಣ್ಣ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಅವರ ವಾಸ್ತವ ಸ್ಥಿತಿಗೆ ಅನುಗುಣವಾಗಿ ಪ್ರತ್ಯೇಕ ಮೀಸಲಾತಿ ಹಾಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಣ್ಣ ಸಮುದಾಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿಶೇಷ ನೆರವು, ಸರ್ಕಾರಿ ಉದ್ಯೋಗಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರವೂ ಸಣ್ಣ ಸಮುದಾಯಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಸಣ್ಣ ಸಮುದಾಯಗಳ ಮುಖಂಡರನ್ನು ಶೀಘ್ರದಲ್ಲೇ ಸಭೆಗೆ ಆಹ್ವಾನಿಸಿ, ಸಮುದಾಯಗಳ ಸಮಸ್ಯೆಗಳು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ದೇವೇಂದ್ರ ದೇಸಾಯಿ ತಿಳಿಸಿದರು.
‘ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಯಾವುದೇ ಸಮುದಾಯದ ಹಕ್ಕುಗಳನ್ನು ಸೀಮಿತಗೊಳಿಸಬಾರದು. ಸಾಮಾಜಿಕ ನ್ಯಾಯ ಎಲ್ಲ ಸಮುದಾಯಗಳಿಗೂ ಸಮಾನವಾಗಿ ದೊರೆಯಬೇಕು. ಸಣ್ಣ ಸಮುದಾಯಗಳಿಗೆ ನ್ಯಾಯಯುತ ಮೀಸಲಾತಿ ಮತ್ತು ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.
ಸಣ್ಣ ಸಮುದಾಯಗಳ ಬೇಡಿಕೆಗಳನ್ನು ಸರ್ಕಾರಗಳು ನಿರ್ಲಕ್ಷಿಸಿದರೆ, ಅವರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ರೀತಿಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.



