ಕಲಬುರಗಿಜಿಲ್ಲೆ ಸುದ್ದಿ

ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಕಳಪೆ: ಅಧಿಕಾರಿಗಳ ಅಮಾನತಿಗೆ ರೈತರ ಆಗ್ರಹ

ರಸ್ತೆ ತಡೆ ನಡೆಸಿ ತಹಶೀಲ್ದಾರ್‌ಗೆ ಮನವಿ

ಜೇವರ್ಗಿ, ಆ. 18: ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೇವರ್ಗಿ ತಾಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನಾಕಾರರು ಬಳಿಕ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಮಹಾಂತಗೌಡ ನಂದಿಹಳ್ಳಿ, ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಬೆಳೆ ವಿಮೆ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಎರಡು ತಾಲೂಕುಗಳ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಮರುಬಿತ್ತನೆಗೆ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಒದಗಿಸಬೇಕು. ಬೆಳೆ ಕಟಾವಿನ ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಿ, ಬೆಳೆ ವಿಮೆಯ ಏಳು ವರ್ಷಗಳ ಇಳುವರಿ ಲೆಕ್ಕಾಚಾರ ಪದ್ಧತಿಯನ್ನು ಕೈಬಿಟ್ಟು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರದ ಪುಣೆ, ಉಜ್ಜಯಿನಿ ಡ್ಯಾಂಗಳಿಂದ ಕರ್ನಾಟಕದ ಡ್ಯಾಂಗಳಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ನೆರವಿಗೆ ಧಾವಿಸಬೇಕು. ಕಬ್ಬು ಕಟಾವು ಆರಂಭವಾದ ಕೂಡಲೇ ಕೂಲಿ ಕಾರ್ಮಿಕರನ್ನು ರೈತರ ಹೊಲಗಳಿಗೆ ಕಳುಹಿಸಬೇಕು. ಕಬ್ಬು ಮಾರಾಟದ ಹಣವನ್ನು ಕಟಾವು ಮುಗಿದ ತಕ್ಷಣ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಜೆಬಿಸಿ ಮತ್ತು ಎಂಬಿಸಿ ವಿಭಾಗದಲ್ಲಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಕಾಮಗಾರಿಯಲ್ಲಿ ಅಕ್ರಮವೆಸಗಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಬಿಲ್ ಪಾವತಿಯನ್ನು ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂಬಂಧ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನೆಲೋಗಿ ಶ್ರೀಗಳು, ಕಡಕೋಳ ಶ್ರೀಗಳು, ಚಿಗರಳ್ಳಿ ಶ್ರೀಗಳು, ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ಪ್ರಶಾಂತ ಪಾಟೀಲ ಜೈನಾಪುರ, ಮಹೇಶಕುಮಾರ ರಾಠೋಡ, ಇಬ್ರಾಹಿಂ ಪಟೇಲ್ ಯಾಳವಾರ, ರವಿಚಂದ್ರ ಗುತ್ತೇದಾರ, ಪಂಚಯ್ಯ ಹಿರೇಮಠ, ಪರಮೇಶ್ವರ ಬೀರಾಳ, ಭೀಮಾಶಂಕರ ಬಿಲ್ಲಾಡ್, ದೇವಮ್ಮ ಯಾಳವಾರ, ಮಂಜುಳ ಬಜಂತ್ರಿ, ಸುಶೀಲಾ ಪೂಜಾರಿ, ಸಾಹೇಬಗೌಡ ಹಂಗರಗಿ ಸೇರಿದಂತೆ ರೈತರು ಹಾಗೂ ವಿವಿಧ ಮಠಾಧೀಶರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button