ಕಲಬುರಗಿ ಸಾಹಿತ್ಯ ಸಂಭ್ರಮಕ್ಕೆ ಕಳೆ: ನೂರಾರು ಕವಿ–ಕಲಾವಿದರ ಭಾಗಿ
ಸಾಹಿತ್ಯ–ಸಾಂಸ್ಕೃತಿಕ ಬದುಕು ನಮ್ಮದಾಗಲಿ: ಸಂತೋಷಿರಾಣಿ ಪಾಟೀಲ ತೆಲ್ಕೂರ

ಕಲಬುರಗಿ: ಕನ್ನಡ ನಾಡು–ನುಡಿ ಹಾಗೂ ನೆಲ–ಜಲವನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ಆಗ ಮಾತ್ರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಸಾಹಿತ್ಯದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾ ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷೆ ಸಂತೋಷಿರಾಣಿ ಪಾಟೀಲ ತೆಲ್ಕೂರ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್, ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ್ದ ‘ಕಲಬುರಗಿ ಸಾಹಿತ್ಯ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕೊಡುಗೆ ನಮ್ಮ ನೆಲದ ಹೆಮ್ಮೆಯಾಗಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡು–ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವಿನಲ್ಲಿ ಜಿಲ್ಲೆಯ ಬರಹಗಾರರ ಪಾತ್ರ ದೊಡ್ಡದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾಮಾಜಿಕ ನ್ಯಾಯದ ಪರವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಸಂಶೋಧಕ ಮುಡುಬಿ ಗುಂಡೇರಾವ್, ಕಲಬುರಗಿ ನೆಲದ ಇತಿಹಾಸ ಮತ್ತು ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ ರಾಷ್ಟ್ರಕೂಟರು ಹಾಗೂ ಚಾಲುಕ್ಯರ ವೈಭವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಕನ್ನಡದ ಪ್ರಥಮ ಕೃತಿ ‘ಕವಿರಾಜಮಾರ್ಗ’ ರಚನೆಯಾದ ಪುಣ್ಯ ನೆಲ ಕರ್ನಾಟಕ. ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲಿ ಕಲಬುರಗಿ ಭಾಗದ ಕೊಡುಗೆಯೂ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಮಂಜುಳಾ ಪಾವಗಡ, ವಿಜಯಪುರದ ಮಕ್ಕಳ ಸಾಹಿತ್ಯ ಪಂಡಿತ ಅವಜಿ, ಹಿರಿಯ ಸಾಹಿತಿ ಡಾ. ಸಿದ್ದಣ್ಣ ಬಾಡಗಿ, ಧನಲಕ್ಷ್ಮೀ, ಶಿವರಾಜ ಅಂಗಡಿ, ಡಾ. ಡಿ. ಪೂಜಾರಿ ಹುಂಡೇಕಲ್, ಭಾಗ್ಯಶ್ರೀ ಬಾಬಣ್ಣ, ನಬಿ ರಸೂಲ್, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ದಪ್ಪ ತಳ್ಳಳ್ಳಿ, ಸಿದ್ದು ಬಾನರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲೇಖಕರಾದ ಧನಲಕ್ಷ್ಮೀ ಹಾಗೂ ಶರಣಗೌಡ ಪಾಟೀಲ ಅವರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಕವಿ-ಕಲಾವಿದರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.



