ಅ.31ರಂದು ದಂಡಗುಂಡ ಬಸವಣ್ಣ ಮಹಾರಥೋತ್ಸವ
ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ; ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆ

ಕಳೆದ ಅಮಾವ್ಯಾಸೆಯಂದು ದೇವಸ್ಥಾನದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಹೀಗಾಗಿ ಜಾತ್ರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದೆ. ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಯಬೇಕು. ಸುಗಮ ಜಾತ್ರೆಗೆ ಸೂಕ್ತ ಬಂದೋಬಸ್ತ್ ಅಗತ್ಯವಿದೆ.-ಚಂದ್ರಶೇಖರ ಅವಂಟಿ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ.
ಚಿತ್ತಾಪುರ: ತಾಲ್ಲೂಕಿನ ದಂಡಗುಂಡ ಗ್ರಾಮದಲ್ಲಿ ಶ್ರೀ ಬಸವಣ್ಣ ಜಾತ್ರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 31ರಂದು ಅದ್ದೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ಈಗಾಗಲೇ ದೇವಸ್ಥಾನ ಟ್ರಸ್ಟ್ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ತಿಳಿಸಿದರು.
ದಂಡಗುಂಡ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಶುಕ್ರವಾರ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶ್ರಾವಣ ಮಾಸದ ನಡುವಿನ ಸೋಮವಾರದಂದು ದಂಡಗುಂಡ ಬಸವಣ್ಣನ ಜಾತ್ರೆ ನಡೆಯಲಿದ್ದು, ವಿವಿಧ ಊರುಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ನಿರಂತರ ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.
ಮಹಾರಥಕ್ಕೆ ವೈಭವದ ಅಲಂಕಾರ ಮಾಡಬೇಕು. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ದಾಸೋಹ ವ್ಯವಸ್ಥೆ ಶುಚಿ ಮತ್ತು ರುಚಿಕರವಾಗಿರಬೇಕು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಹೇಳಿದರು.
ದಂಡಗುಂಡ ಬಸವಣ್ಣನ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ಮಾರ್ಗ ಹಾಗೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಪ್ರತ್ಯೇಕ ಮಾರ್ಗವನ್ನು ಗುರುತಿಸಲಾಗಿದೆ. ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲ್ಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತದೆ.
ಮಂಜುನಾಥ ರೆಡ್ಡಿ-ಪಿಎಸ್ಐ, ಚಿತ್ತಾಪುರ ಪೊಲೀಸ್ ಠಾಣೆ.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತರಿಗೆ ತಾಲೂಕು ಆಡಳಿತದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ವಿದ್ಯುತ್ ವ್ಯವಸ್ಥೆ, ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾತನಾಡಿ, ದಂಡಗುಂಡ ಬಸವಣ್ಣ ಜಾತ್ರೆ ಈ ಭಾಗದ ಪ್ರಮುಖ ಧಾರ್ಮಿಕ ಜಾತ್ರೆಗಳಲ್ಲಿ ಒಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಉಂಟಾಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಳ್ಕೊಳ್ಳಿ ಮಾರ್ಗದಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ಹಾಗೂ ಯಾಗಾಪುರ ಭಾಗದಿಂದ ಆಗಮಿಸುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಬಳಿಯ ಮೈದಾನದವರೆಗೆ ಮಾತ್ರ ಬಸ್ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ದೇವರ ದರ್ಶನಕ್ಕಾಗಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಮಾಡಲಾಗುವುದು. ಗರ್ಭಗುಡಿಯ ಪ್ರದಕ್ಷಿಣೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಜಾತ್ರೆಗೆ ಆಗಮಿಸುವ ಭಕ್ತರು ಆಡಳಿತ ಮತ್ತು ದೇವಸ್ಥಾನ ಸಮಿತಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ನ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ವಿವಿಧ ಮಠಾಧೀಶರನ್ನು ಆಹ್ವಾನಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಿಂದಿನಿಂದಲೂ ದಂಡಗುಂಡ ಬಸವಣ್ಣ ಜಾತ್ರೆ ಶಾಂತಿಯುತವಾಗಿ ನಡೆಯುತ್ತಿದ್ದು, ಗ್ರಾಮಸ್ಥರು ಹಾಗೂ ಭಕ್ತರು ದಾಸೋಹ ಸೇವೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಿಪಿಐ ಎಸ್.ಸಿ. ಪಾಟೀಲ್, ಚಂದ್ರಶೇಖರ ಅವಂಟಿ ಹಾಗೂ ಪಿಎಸ್ಐ ಮಂಜುನಾಥ್ ರೆಡ್ಡಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ್, ಸದಸ್ಯರಾದ ರಾಜಶೇಖರಗೌಡ ಸಂಕನೂರ್, ಮಹಾಂತಗೌಡ ಮಾಲಿಪಾಟೀಲ್ ದಂಡಗುಂಡ, ಜೆಸ್ಕಾಂ ಇಲಾಖೆಯ ಜೆಇ ಆಂಜನೇಯ ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಮಹೇಶ ರುಮಾಲ ನಿರೂಪಿಸಿದರು.



