ಸಹಕಾರಿ ಸಂಸ್ಥೆಗಳು ಸಮಾಜಮುಖಿ ಸೇವೆಗೆ ಆದ್ಯತೆ ನೀಡಲಿ: ಬಾಬುರಾವ್ ಯಡ್ರಾಮಿ

ಕಲಬುರಗಿ: ಸಹಕಾರಿ ಸಂಸ್ಥೆಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ, ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಹೇಳಿದರು.
ನಗರದ ಭವಾನಿ ನಗರ ರಿಂಗ್ರೋಡ್ನ ಬಳಲಾದ ಮಠದ ಸಮೀಪದ ಓಂ ಶ್ರೀ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ವತಿಯಿಂದ ಆಯೋಜಿಸಿದ್ದ 2025–26ನೇ ಸಾಲಿನ 14ನೇ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರವು ಜನರ ಆರ್ಥಿಕ ಪ್ರಗತಿಯ ಜೊತೆಗೆ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತನ್ನ ಪಾತ್ರವನ್ನು ವಿಸ್ತರಿಸಬೇಕು. ವಿಶೇಷವಾಗಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತಜ್ಞ ವೈದ್ಯರ ಸಲಹೆ ಮತ್ತು ಆರೋಗ್ಯ ಸೇವೆ ದೊರಕುವಂತೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಶ್ಲಾಘನೀಯ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಎಸ್. ಪರಸರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ರಾಮಪ್ಪ ಎಚ್. ಬಿರಬಿಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತ್ಯದ ವ್ಯವಸ್ಥಾಪಕ ಸಂಜೀವ ಕೊರಟಗರ್, ಉದ್ಯಮಿ ಹಣಮಂತ ಎಸ್. ಪೂಜಾರಿ, ಪ್ರತಾಪರಾವ್ ಜಿ. ಕಾಕಡೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಶ್ರೀ ಆರೈಕೆ ಆಸ್ಪತ್ರೆ ಮತ್ತು ಗ್ಯಾಸ್ಟ್ರೋ ಲಿವರ್ ಮಲ್ಟಿಸ್ಪೆಷಾಲಿಟಿ ಸೆಂಟರ್ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹೆಪಟಾಲಜಿಸ್ಟ್ ಹಾಗೂ ಥೆರಪ್ಯುಟಿಕ್ ಎಂಡೋಸ್ಕೋಪಿಸ್ಟ್ ಡಾ. ಶ್ರೀನಿಧಿ ಬಿ. ಪಾಟೀಲ ಮತ್ತು ಫಿಸಿಷಿಯನ್ ಹಾಗೂ ಡಯಾಬಿಟಾಲಜಿಸ್ಟ್ ಡಾ. ಶ್ರೀಗೌರಿ ರೆಡ್ಡಿ ಪಾಟೀಲ ಅವರು ತಪಾಸಣೆ ನಡೆಸಿದರು.
ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಥೈರಾಯ್ಡ್ ಸೇರಿದಂತೆ ಗ್ಯಾಸ್ಟ್ರೋ, ಲಿವರ್, ಪ್ಯಾಂಕ್ರಿಯಾಸ್, ಪಿತ್ತಕೋಶ ಹಾಗೂ ಕರುಳಿನ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಿ ಉಚಿತ ವೈದ್ಯಕೀಯ ಸಲಹೆ ನೀಡಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯ ಸೇವೆಯ ಪ್ರಯೋಜನ ಪಡೆದರು.



