ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ಗಣ್ಯರಿಗೆ ಸನ್ಮಾನ

ಕಲಬುರಗಿ: ನಗರದ ಜಗತ್ ವೃತ್ತದ ಗೋಮುಖದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಭಾನುವಾರ ಆಚರಿಸಲಾಯಿತು.
ಬೆಳಿಗ್ಗೆ 8ರಿಂದ ಅಷ್ಟೋತ್ತರ ಶ್ರೀ ಪೂರ್ಣಪ್ರಜ್ಞ ಪಾರಾಯಣ ಸಂಘದ ವತಿಯಿಂದ ಪಾರಾಯಣ ನಡೆಯಿತು. ಬಳಿಕ ಬೆಳಿಗ್ಗೆ 9ರಿಂದ 10.30ರವರೆಗೆ ಶ್ರೀ ಗುರುಸಾರ್ವಭೌಮರ ಉತ್ಸವ ಮೂರ್ತಿಯ ಪಲ್ಲಕ್ಕಿ ಗ್ರಾಮ ಪ್ರದಕ್ಷಿಣೆ ನಡೆಯಿತು. ನಂತರ ವೇದಶಾಸ್ತ್ರ ಪಂಡಿತ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಭರತಕುಮಾರ, ಬೆಂಗಳೂರಿನಿಂದ ಆಗಮಿಸಿದ್ದ ನಟ ಅವಿನಾಶ, ಚಿತ್ರಕಲಾವಿದೆ ಹಾಗೂ ನಟಿಯರಾದ ಕು. ಅಂಕಿತಾ ಜಯರಾಮ್, ತ್ವಿಷಾ ತೇಜು, ಕಾಮಿಡಿ ಕಿಲಾಡಿ ಖ್ಯಾತಿಯ ರಘು ಶಿರೂಂಡೆ, ಜಯರಾಮ್ ಹಾಗೂ ರಂಜಿತಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಹಣಮಂತರಾವ್ ಗೊಟೂರ್, ಕಾರ್ಮಿಕ ಮುಖಂಡ ಹಾಗೂ ಸಮಾಜ ಸೇವಕ ಪವನ್ ಫಿರೋಜಾಬಾದ್, ನೀಲ ಲೋಹಿತ್, ವಿನೋದ ದೇಸಾಯಿ, ಪ್ರಮೋದ ದೇಸಾಯಿ, ಶಶಿಕಾಂತ ಸಾಗನೂರು, ಉಲ್ಲಾಸ ಕುಲಕರ್ಣಿ, ದೀಪಕ್, ಪ್ರಕಾಶ ಕುಲಕರ್ಣಿ, ಶಂಕರರಾವ್, ವೆಂಕಟರಮಣ ಓಂಕಾರ್, ವಿಜಯಕುಮಾರ್ ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.



