ಬರ ಘೋಷಣೆಗೆ ಆಗ್ರಹ: ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಬಿಜೆಪಿ ಪ್ರತಿಭಟನಾ ರ‍್ಯಾಲಿ
ತಹಶೀಲ್ದಾರ್ ವಿರುದ್ಧ ಆಕ್ರೋಶ; ಮನವಿ ಸ್ವೀಕಾರ ವೇಳೆ ಮಾತಿನ ಚಕಮಕಿ

ತಹಶೀಲ್ದಾರ್ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಲಾಡ್ಜಿಂಗ್ ಕ್ರಾಸ್‌ನಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮನವಿ ಪತ್ರ ಸ್ವೀಕರಿಸಲು ಬಂದ ತಹಶೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆಲ ಮುಖಂಡರು ಭಾಷಣ ಮುಂದುವರಿಸಲು ಮುಂದಾದರು. ಈ ವೇಳೆ ತಹಶೀಲ್ದಾರ್ ಪ್ರತಿಭಟನಾ ಸ್ಥಳದಿಂದ ತಮ್ಮ ವಾಹನದತ್ತ ತೆರಳಲು ಮುಂದಾದರು. ‘ನಾವು ಮನವಿ ಪತ್ರ ನೀಡುತ್ತಿದ್ದೇವೆ, ನೀವು ಹೀಗೆ ತೆರಳಿದರೆ ಹೇಗೆ’ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ತಹಶೀಲ್ದಾರ್ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಚಿತ್ತಾಪುರ: ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿದ್ದು, ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಬಿಜೆಪಿ ರೈತ ಮೋರ್ಚಾ ಚಿತ್ತಾಪುರ ಮಂಡಲದ ವತಿಯಿಂದ ಗುರುವಾರ ಪಟ್ಟಣದಲ್ಲಿ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಪಟ್ಟಣದ ಚಿತ್ತಾಶಾಹವಲಿ ಚೌಕದಿಂದ ಆರಂಭವಾದ ರ‍್ಯಾಲಿ ಜನತಾ ಚೌಕ, ಭುವನೇಶ್ವರಿ ಚೌಕ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಲಾಡ್ಜಿಂಗ್ ಕ್ರಾಸ್‌ವರೆಗೆ ಸಾಗಿತು. ವಿವಿಧ ಗ್ರಾಮಗಳಿಂದ ನೂರಾರು ರೈತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
‘ಬರ ಘೋಷಣೆ ಮಾಡಿ ರೈತರ ಬದುಕು ಉಳಿಸಿ’, ‘ಬರ ಘೋಷಣೆ ನಮ್ಮ ಹಕ್ಕು’ ಎಂಬ ಘೋಷಣೆಗಳು ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಮೊಳಗಿದವು. ಲಾಡ್ಜಿಂಗ್ ಕ್ರಾಸ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ‘ತಾಲೂಕಿನಲ್ಲಿ ಬಹುತೇಕ ಬೆಳೆಗಳು ಹಾನಿಯಾಗಿದ್ದರೂ ಇನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಕಾಲಹರಣ ಮಾಡದೆ ಕೂಡಲೇ ಬರ ಘೋಷಿಸಬೇಕು’ ಎಂದು ಒತ್ತಾಯಿಸಿದರು.
ರೈತ ಮೋರ್ಚಾ ಅಧ್ಯಕ್ಷ ರಮೇಶ ಬೊಮ್ಮನಹಳ್ಳಿ ಮಾತನಾಡಿ, ಇತರೆ ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರದ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಚಿತ್ತಾಪುರ ಕ್ಷೇತ್ರದ ಶಾಸಕರು ರೈತರ ಗಂಭೀರ ಸಮಸ್ಯೆಗಳ ಕುರಿತು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಾದ್ಯಂತ ಮಳೆಯಿಲ್ಲದೆ ಹಾನಿಯಾಗಿರುವ ಹೆಸರು ಮತ್ತು ಉದ್ದು ಬೆಳೆಗಳಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಹಿಂಗಾರು ಬೆಳೆಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಉಚಿತವಾಗಿ ವಿತರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. 2025–26ನೇ ಸಾಲಿನ ಬೆಳೆ ವಿಮೆ ಸಮರ್ಪಕವಾಗಿ ವಿತರಿಸಬೇಕು. ಜಾನುವಾರುಗಳಿಗೆ ಸರ್ಕಾರದಿಂದ ಮೇವು ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಿಂದ ಲಾಡ್ಜಿಂಗ್ ಕ್ರಾಸ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ವಾಹನಗಳ ಉದ್ದನೆಯ ಸಾಲು ಕಂಡುಬಂದಿದ್ದು, ಪ್ರಯಾಣಿಕರು ಪರದಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ, ಕಾರ್ಯದರ್ಶಿ ಗಿರೀಶ ಭಜಂತ್ರಿ, ಹಿರಿಯ ಮುಖಂಡರಾದ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಚಂದ್ರಶೇಖರ್ ಅವಂಟಿ, ವಿಠಲ ವಾಲ್ಮೀಕಿ ನಾಯಕ, ಮಲ್ಲಿಕಾರ್ಜುನ ಎಮ್ಮೆನೋರ, ಅಯ್ಯಪ್ಪ ರಾಮತೀರ್ಥ, ಭೀಮರೆಡ್ಡಿಗೌಡ ಕುರಾಳ, ಶಾಂತಕುಮಾರ ಮಳಖೇಡ, ಸುರೇಶ ಬೆನಕನಳ್ಳಿ, ಸುರೇಶ ರಾಠೋಡ, ಶಂಕರ ಚವ್ಹಾಣ ಸೇರಿದಂತೆ ಹಲವರು ಇದ್ದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎಸ್.ಸಿ. ಪಾಟೀಲ ಹಾಗೂ ಪಿಎಸ್‌ಐ ಮಂಜುನಾಥರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.



