ಜಿಲ್ಲೆ ಸುದ್ದಿಯಾದಗಿರಿ

ಯರಗೋಳ ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆ: ಉಮೇಶ ಮುದ್ನಾಳ ಆರೋಪ

ಯಾದಗಿರಿ: ತಾಲೂಕಿನ ಯರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗೋಳ ಗ್ರಾಮದ ವಾರ್ಡ್‌ ನಂ. 2ರಲ್ಲಿ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆರೋಪಿಸಿದರು.

ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಅವರು, ವಾರ್ಡ್‌ ನಂ. 2ರ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರೊಂದಿಗೆ ಕಾಲ್ನಡಿಗೆ ಮೂಲಕ ಸಂಚರಿಸಿ, ತಮಟೆ ಬಾರಿಸುವ ಮೂಲಕ ಸಮಸ್ಯೆಗಳ ಪರಿಶೀಲನೆ ನಡೆಸಿದರು.

ಗ್ರಾಮದ ಹಲವು ಕಡೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ತಗ್ಗು ಪ್ರದೇಶಗಳಲ್ಲಿ ಕಲುಷಿತ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ ಎಂದು ಅವರು ಹೇಳಿದರು.

ಗ್ರಾಮದಲ್ಲಿ ಸಮರ್ಪಕ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದಿರುವುದು, ಮಹಿಳೆಯರಿಗೆ ಅಗತ್ಯ ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಅವರು ದೂರಿದರು.

ಯರಗೋಳ ಗ್ರಾಮದಿಂದ ಬೈಪಾಸ್ ರಸ್ತೆಯ ಮೂಲಕ ರೈಲ್ವೆ ಸೇತುವೆವರೆಗೆ ರೈತರ ಜಮೀನುಗಳಿಗೆ ತೆರಳುವ ರಸ್ತೆಯೂ ತಗ್ಗು-ಗುಂಡಿಗಳಿಂದ ಕೂಡಿದ್ದು, ಜಾಲಿಕಂಟಿಗಳು ಬೆಳೆದಿವೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ದ್ವಿಚಕ್ರ ವಾಹನ ಸವಾರರು ಕೆಸರು ಹಾಗೂ ಕೊಳಚೆ ನೀರಿನಲ್ಲಿ ಬಿದ್ದು ಸಂಕಷ್ಟ ಅನುಭವಿಸುವುದು ನಿತ್ಯದ ಸಂಗತಿಯಾಗಿದೆ. ವಾರ್ಡ್‌ನಲ್ಲಿ ಸಮರ್ಪಕ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳ ವ್ಯವಸ್ಥೆ ಇಲ್ಲದೆ ಕೆಲ ಪ್ರದೇಶಗಳಲ್ಲಿ ಕತ್ತಲಿನ ವಾತಾವರಣ ನಿರ್ಮಾಣವಾಗಿದೆ. ಕುಡಿಯುವ ನೀರು ತರಲು ಕೂಡ ಕೊಳಚೆ ಪ್ರದೇಶದ ಮೂಲಕವೇ ತೆರಳಬೇಕಾದ ಪರಿಸ್ಥಿತಿ ಇದೆ ಎಂದು ಮುದ್ನಾಳ ಹೇಳಿದರು.

ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದ್ದರೂ, ಮೂಲಸೌಲಭ್ಯಗಳ ಸ್ಥಿತಿ ಹೀಗಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿಗೆ ಬಂದ ಹಣ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಒಂದು ವಾರದೊಳಗೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಯಾದಗಿರಿ-ಕಲಬುರಗಿ ಮುಖ್ಯ ರಸ್ತೆಯ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾರಕೋಲು ಹಿಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭೀಮಾಶಂಕರ, ಮಲ್ಲೇಶಿ, ಸೂರ್ಯಕಾಂತ, ಶರಣಪ್ಪ, ಚಂದ್ರಪ್ಪ, ಸಾಬಣ್ಣ, ಬಸವರಾಜ, ಈಶಪ್ಪ, ದೇವಪ್ಪ, ನೀಲಕಂಠ, ಭೀಮಾ, ಲಕ್ಷ್ಮಣ, ಮೌನೇಶ, ಅಶೋಕ, ರೇಡ್ಡೆಪ್ಪ, ಮಲ್ಲಪ್ಪ, ಕಲ್ಲಪ್ಪ, ಕರ್ಣಪ್ಪ, ಮಹಾದೇವಪ್ಪ, ರಾಮಪ್ಪ, ಸೂರ್ಯ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button