ಕಲಬುರಗಿಜಿಲ್ಲೆ ಸುದ್ದಿ

ಶ್ರಾವಣ ಮಾಸದ ಕಾರ್ಯಕ್ರಮಗಳು ಸಾಮಾಜಿಕ ಸಾಮರಸ್ಯಕ್ಕೆ ಪೂರಕ: ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ: ನಗರದ ಮಹಾದೇವಪ್ಪ ರಾಂಪುರೆ ಕುಡಾ ಬಡಾವಣೆಯಲ್ಲಿ ಕಳೆದ ಐದು ವರ್ಷಗಳಿಂದ ಶ್ರಾವಣ ಮಾಸದ ಅಂಗವಾಗಿ ನಿರಂತರ 30 ದಿನಗಳ ಕಾಲ ವಿಶೇಷ ಉಪನ್ಯಾಸಗಳು ಹಾಗೂ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ಬಡಾವಣೆಯ ಔಷಧಿ ಭವನದಲ್ಲಿ ನಡೆದ ಐದನೇ ವರ್ಷದ 30 ದಿನಗಳ ಶ್ರಾವಣ ಮಾಸದ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಾವಣ ಮಾಸದ ಸಂದರ್ಭದಲ್ಲಿ ಧಾರ್ಮಿಕ ಚಿಂತನೆಗಳ ಜತೆಗೆ ಸಾಮಾಜಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವಂತಹ ಕಾರ್ಯಕ್ರಮಗಳನ್ನು ಐದು ವರ್ಷಗಳಿಂದ ನಿರಂತರವಾಗಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಬಲಪಡಿಸಲು ಸಹಕಾರಿಯಾಗುತ್ತವೆ ಎಂದರು.

ಬಡಾವಣೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಮನವಿಯಂತೆ ತಮ್ಮ ಅನುದಾನದಲ್ಲಿ ಅಗತ್ಯ ನೆರವು ನೀಡುವುದಾಗಿ ಕಮಕನೂರ ಭರವಸೆ ನೀಡಿದರು. ಕಾರ್ಯಕ್ರಮದ ಆಯೋಜಕರ ಕಾರ್ಯವನ್ನು ಅವರು ಇದೇ ಸಂದರ್ಭದಲ್ಲಿ ಮೆಚ್ಚಿ, ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸ್ಪಂದನ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಡಾವಣೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಡಾವಣೆಯ ಹಿರಿಯರಾದ ಡಾ. ಬಾಬುರಾವ್ ಕುಲಕರ್ಣಿ ಮಾರ್ಗದರ್ಶಕರಾಗಿ, ನಾಗರಾಜ್ ಸುರಪುರ ಅಧ್ಯಕ್ಷರಾಗಿ ಹಾಗೂ ನಾಗೇಂದ್ರಪ್ಪ ಗೌರವಾಧ್ಯಕ್ಷರಾಗಿ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಾಜಿ ಕುಡಾ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಹಾಗೂ ಕೃಷ್ಣಾ ಜಿ. ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸೊನ್ನದ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳು, ಪ್ರತಿಭಾವಂತ ವಿದ್ಯಾರ್ಥಿನಿಯರು ಹಾಗೂ ನಿವೃತ್ತರನ್ನು ಸನ್ಮಾನಿಸಲಾಯಿತು.

ಡಾ. ಬಾಬುರಾವ್ ಕುಲಕರ್ಣಿ ಪ್ರಾಸ್ತಾವಿಕ ಹಾಗೂ ವಾಸ್ತವಿಕ ನುಡಿಗಳನ್ನಾಡಿದರು. ನಾಗರಾಜ್ ಸುರಪುರ ಮಾತನಾಡಿ, ಬಡಾವಣೆಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಸಹಕಾರದಿಂದ ಐದು ವರ್ಷಗಳ ಶ್ರಾವಣ ಮಾಸದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ಸಹಕಾರ ನೀಡಿದ ಎಲ್ಲ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

ಡಾ. ನಾಗರಾಜ್ ಬಡಿಗೇರ್ ಕಾರ್ಯಕ್ರಮ ನಿರ್ವಹಿಸಿದರು. ಅವರಿಗೆ ನಾಗರಾಜ್ ಕುಲಕರ್ಣಿ ಸಹಕರಿಸಿದರು. ವೀರೇಶ್ ಅರಿಕೇರಿ ವಂದಿಸಿದರು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ವಂದೇ ಮಾತರಂನೊಂದಿಗೆ ಸಮಾರೋಪಗೊಂಡಿತು. ಶ್ರೀಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ನಿವೃತ್ತ ಪ್ರಾಂಶುಪಾಲ ಶರಣಪ್ಪ ಕಟ್ಟಿಮನಿ, ಸಾಮಾಜಿಕ ಹೋರಾಟಗಾರ ಪಿಡ್ಡಪ್ಪ ಜಾಲಗಾರ, ವೆಂಕಟೇಶ್ ಅಡ್ವಾಣಿ, ವೀರೇಶ್ ಕ್ಷತ್ರೀಯ, ಗಣಪತಿ ಪೂಜಾರಿ, ನಾಗರಾಜ ಜಮಾದಾರಾಖಾನಿ ಸೇರಿದಂತೆ ಬಡಾವಣೆಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button