ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರಲು ನಿರಂತರ ಪ್ರಯತ್ನ ಅಗತ್ಯ

ಕಲಬುರಗಿ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯದ ನಿರ್ಮಾಪಕರು. ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ಕಾರ್ಯಪ್ರವೃತ್ತರಾದರೆ ಭವಿಷ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ಖ್ಯಾತ ಮಕ್ಕಳ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ನಗರದ ಎಕೇಜಿಆರ್ ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಉತ್ತಮ ಚಾರಿತ್ರ್ಯ ಹೊಂದಿರುವ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿರುವ ಎಕೇಜಿಆರ್ ದೇವಿ ಪಿಯು ಕಾಲೇಜಿನ ಸಾಧನೆ ಅವಿಸ್ಮರಣೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿಕೊಂಡಿರುವ ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕಿನೆಡೆಗೆ ಮುನ್ನಡೆಸುವ ಮಾರ್ಗವೇ ಶಿಕ್ಷಣ. ಇಂತಹ ಸಂಸ್ಕಾರಭರಿತ ಶಿಕ್ಷಣ ಈ ಸಂಸ್ಥೆಯಲ್ಲಿ ದೊರೆಯುತ್ತಿರುವುದು ಸಂತಸದ ಸಂಗತಿ ಎಂದರು.
ಸಂಶೋಧಕ ಹಾಗೂ ಸಾಹಿತಿ ಮುಡುಬಿ ಗುಂಡೇರಾವ್ ಮಾತನಾಡಿ, ‘ನಮ್ಮ ಪ್ರದೇಶದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ಪ್ರಾಚೀನ ಕಾಲದ ಮಹತ್ವವನ್ನು ಪರಿಚಯಿಸುವುದು ಅಗತ್ಯ. ನಮ್ಮ ನೆಲವೇ ನಮಗೆ ಪ್ರೇರಣೆಯಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕೇಜಿಆರ್ ದೇವಿ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ, ಅವರನ್ನು ನಾಗರಿಕ ಸಮಾಜದಲ್ಲಿ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಎಲ್ಲ ಪೋಷಕರ ಮೇಲಿದೆ. ವಿದ್ಯಾರ್ಥಿಗಳು ಟಿ.ವಿ. ಹಾಗೂ ಮೊಬೈಲ್‌ಗಳಿಂದ ದೂರವಿದ್ದು, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸಿದ್ಧಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಚನ ಪ್ರಿಯ ಜಗದೀಶ ಮರಪಳ್ಳಿ, ಕಾಲೇಜಿನ ವ್ಯವಸ್ಥಾಪಕ ಎಂ.ವಿ.ಎಸ್. ಸುಬ್ರಹ್ಮಣ್ಯಂ, ಕಿರಣ ಗೋಡಬಾಳೆ, ಶಿವರಾಜ ಪಾಟೀಲ, ಪರಮಾನಂದ ಸರಸಂಬಿ, ರಾಜೇಂದ್ರ ಮಾಡಬೂಳ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಬಸವರಾಜ ಮೊರಬದ, ಪ್ರೊ. ಎಸ್.ಎಲ್. ಪಾಟೀಲ, ಧರ್ಮರಾಜ ಜವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



