ಕೆಮಿಕಲ್ ಬಣ್ಣಗಳಿಗೆ ಬದಲು ಮುತ್ತುಗ ಹೂ ಬಳಸಿ ಹೋಳಿ ಆಚರಿಸಬೇಕು: ಉಮೇಶ್ ಕೆ. ಮುದ್ನಾಳ ಕರೆ

ಚಿತ್ತಾಪೂರ ರಸ್ತೆಯಲ್ಲಿರುವ ವೀರಭದ್ರಶ್ವರ ನಗರದಲ್ಲಿ ಶ್ರೀ ಸಿದ್ದಿವಿನಾಯಕ ದೇವಾಲಯದಲ್ಲಿ ಮುತ್ತುಗ ಮರದ ಹೂವಿನ ಬಗ್ಗೆ ಜಾಗೃತಿ ಮೂಡಿಸಲಾಯಿತು ಮತ್ತು ನಾಳೆ ನಡೆಯುವ ಹೋಳಿ ಹಬ್ಬದಂದು ನಾವು ಇದೇ ಮುತ್ತುಗ ಮರದ ಹೂವಿನಿಂದ ಬಣ್ಣ ತಯಾರಿಸಿ ಹೋಳಿ ಆಚರಿಸಲು ನಿರ್ಧರಿಸಲಾಯಿತು.-ಉಮೇಶ್ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ.
ಯಾದಗಿರಿ: ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋಳಿ ಹಬ್ಬ ಮುತ್ತುಗ (ಓಕುಳಿಕಿ) ಹೂವಿನ ನೈಸರ್ಗಿಕ ಬಣ್ಣ ಮತ್ತು ಸುವಾಸನೆಯ ಹಬ್ಬವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೋಳಿ ಸಂದರ್ಭದಲ್ಲಿ ಯುವಕರು ಕೆಮಿಕಲ್ ಬಣ್ಣಗಳಿಗೆ ಮೊರೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ತಿಳಿಸಿದ್ದಾರೆ.
ಮಂಗಳವಾರ ಮುತ್ತುಗ ಮರಗಳಿರುವ ಗುಡ್ಡಗಾಡು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನೈಸರ್ಗಿಕವಾಗಿ ಲಭ್ಯವಾಗುವ ಮುತ್ತುಗ ಹೂಗಳನ್ನು ಒಣಗಿಸಿ ನೀರಿನಲ್ಲಿ ಕಲಿಸಿದರೆ ಸುಂದರ ಕೆಂಪು ಬಣ್ಣ ದೊರೆಯುತ್ತದೆ. ಈ ಬಣ್ಣದಿಂದ ಹೋಳಿ ಆಡಿದರೆ ಮಕ್ಕಳಿಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಮುತ್ತುಗ ಹೂವು ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೂ ಉಪಯುಕ್ತವಾಗಿದೆ ಎಂದು ಹೇಳಿದರು.
ಉದ್ಯಾನವನಗಳು, ಕ್ರೀಡಾಂಗಣಗಳು ಹಾಗೂ ಸರ್ಕಾರಿ ಕಚೇರಿ ಆವರಣಗಳಲ್ಲಿ ಅಲಂಕಾರಿಕ ಮತ್ತು ಉಪಯೋಗವಿಲ್ಲದ ಮರಗಳನ್ನು ನೆಡುವ ಬದಲು ಮುತ್ತುಗ ಮರಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಇದರಿಂದ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ನೈಸರ್ಗಿಕ ಸಂಪತ್ತಿನ ಅರಿವು ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅರಣ್ಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಮುತ್ತುಗ ಮರ ಬೆಳೆಸುವ ವಿಧಾನ ಕುರಿತು ಸಮಗ್ರ ಮಾಹಿತಿ ಪಡೆದು ಜಿಲ್ಲೆಯಾದ್ಯಂತ ಇಂತಹ ಮರಗಳ ಸಂರಕ್ಷಣೆ ಮತ್ತು ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ವಿಜಯ ಪಾಟೀಲ್, ಶಿವು ಪರಿಸಿ, ಮಹೇಶ್, ಭೀಮಾಶಂಕರ, ಮಲ್ಲು ರಾಹುಲ್, ರಾಜು, ಸಾಬರೆಡ್ಡಿ, ದೇವರಾಜ, ಸಚೀನ್ ಅಣ್ಣವೀರ, ದೇವು ಸೇರಿದಂತೆ ಹಲವರು ಭಾಗವಹಿಸಿದರು.



