ಕನಿಷ್ಠ ವೇತನ ಪರಿಷ್ಕರಣೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
AITUC ನೇತೃತ್ವದಲ್ಲಿ ಪ್ರತಿಭಟನೆ

ಕಲಬುರಗಿ: ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ತಕ್ಷಣ ಹೊರಡಿಸಬೇಕು ಹಾಗೂ ತುಟ್ಟಿಭತ್ಯೆ (ಡಿಎ) ಹೆಚ್ಚಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿ ಪ್ರಭುದೇವ ಯಳಸಂಗಿ ಮಾತನಾಡಿ, ಕನಿಷ್ಠ ವೇತನವು ದಾನವಲ್ಲ, ಅದು ಕಾರ್ಮಿಕರ ಶ್ರಮದ ಘನತೆಯನ್ನು ಕಾಪಾಡುವ ಸಂವಿಧಾನಿಕ ಹಕ್ಕು ಎಂದು ಹೇಳಿದರು. 1992ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಪ್ರಕಾರ ಕನಿಷ್ಠ ವೇತನವು ಕಾರ್ಮಿಕರ ಕುಟುಂಬಕ್ಕೆ ಆಹಾರ, ಉಡುಪು, ವಸತಿ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸುವಂತಿರಬೇಕು ಎಂದು ತಿಳಿಸಿದರು.
ಒಬ್ಬ ಕಾರ್ಮಿಕನ ಕುಟುಂಬಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ, ವರ್ಷಕ್ಕೆ ಬಟ್ಟೆ, ಮನೆ ಬಾಡಿಗೆ, ಇಂಧನ ಹಾಗೂ ಬೆಳಕಿನ ವೆಚ್ಚ ಸೇರಿದಂತೆ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳನ್ನು ಕೂಡ ಕನಿಷ್ಠ ವೇತನದಲ್ಲಿ ಒಳಗೊಳ್ಳಬೇಕು ಎಂದು ನ್ಯಾಯಾಲಯ ಮಾರ್ಗಸೂಚಿ ನೀಡಿದೆ. ಆದರೆ ಕಳೆದ 9 ವರ್ಷಗಳಿಂದ ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡದೆ ವಿಳಂಬ ಮಾಡುತ್ತಿರುವುದು ಕಾರ್ಮಿಕರ ಹಕ್ಕುಗಳಿಗೆ ಅನ್ಯಾಯವಾಗಿದೆ ಎಂದು ಯಳಸಂಗಿ ಆರೋಪಿಸಿದರು.
2016–17ರಲ್ಲಿ ಕೊನೆಯ ಬಾರಿ ಕನಿಷ್ಠ ವೇತನ ಪರಿಷ್ಕರಣೆ ನಡೆದಿದ್ದು, ಕನಿಷ್ಠ ವೇತನ ಕಾಯ್ದೆ 1948 ಹಾಗೂ ವೇತನ ಸಂಹಿತೆ 2019 ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೂ ಕಳೆದ ಹಲವು ವರ್ಷಗಳಿಂದ ಪರಿಷ್ಕರಣೆ ಆಗದೆ ಇರುವುದರಿಂದ ದುಡಿಯುವ ಜನರು ಬೆಲೆ ಏರಿಕೆಯ ನಡುವೆಯೂ ಕಡಿಮೆ ವೇತನದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ವೇತನ ವ್ಯವಸ್ಥೆಯಲ್ಲಿ ತುಟ್ಟಿಭತ್ಯೆ ದರ ಅತ್ಯಲ್ಪವಾಗಿದ್ದು, ಗ್ರಾಹಕ ಬೆಲೆ ಸೂಚ್ಯಂಕದ ಪ್ರತಿ ಪಾಯಿಂಟ್ ಹೆಚ್ಚಳಕ್ಕೆ ನೀಡಲಾಗುತ್ತಿರುವ 4 ಪೈಸೆ ದರವನ್ನು 8 ಪೈಸೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಏಪ್ರಿಲ್ 11, 2025ರ ಕರಡು ಕನಿಷ್ಠ ಕೂಲಿ ಅಧಿಸೂಚನೆಯನ್ನು ತಕ್ಷಣ ಅಂತಿಮ ಅಧಿಸೂಚನೆಯಾಗಿ ಪ್ರಕಟಿಸಿ, ಮೂರು ವರ್ಷಗಳ ವಿಳಂಬವನ್ನು ಸರಿದೂಗಿಸಲು 2022ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ಸುಪ್ರೀಂ ಕೋರ್ಟ್ ಮಾನದಂಡಗಳ ಪ್ರಕಾರ ಕಾರ್ಮಿಕರಿಗೆ ಅಗತ್ಯವಾದ ಕ್ಯಾಲೋರಿ ಪ್ರಮಾಣವನ್ನು 2321.4 ಬದಲು 2700 ಕ್ಯಾಲೋರಿಗಳಿಗೆ ಹೆಚ್ಚಿಸಬೇಕು. ಗಾರ್ಮೆಂಟ್ಸ್, ಬೀಡಿ, ಅಗರಬತ್ತಿ ಹಾಗೂ ಪ್ಲಾಂಟೇಷನ್ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸುಮಾರು ಶೇಕಡಾ 40ರಷ್ಟು ವೇತನ ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಚ್.ಎಸ್. ಪತಕಿ, ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ಹಣಮಂತರಾಯ ಅಟ್ಟೂರ, ಮಾನಪ್ಪ ಇಜೇರಿ, ಶಿವಲಿಂಗಮ್ಮ ಲೆಂಗಟಿಕರ್, ಕಲ್ಯಾಣಿ ತುಕ್ಕಾಣಿ, ವಿಶಾಲ ನಂದೂರಕರ್, ಶರಣಬಸ್ಸು ಶಿರೂರಕರ್, ಯಶೋಧ ರಾಠೋಡ, ಬಾಬು ಮಳ್ಳಿ, ಕೈಲಾಸ ವಾಡೆಕರ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.



