ಹೀರೆತುಮಕೂರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಾತ್ರೆ: ಮಾ. 12ರಂದು ಭವ್ಯ ರಥೋತ್ಸವ

“ಹೀರೆತುಮಕೂರ ಗ್ರಾಮಕ್ಕೆ ಮೊದಲ ಬಾರಿಗೆ ಆಗಮಿಸಿದ ಚೌಡಯ್ಯನವರ ಪ್ರವಚನಕಾರ ಸೋಮಲಿಂಗ ಶಾಸ್ತ್ರಿ, ತಬಲವಾದಕ ಶಿವಾನಂದ ತಟಪತಿ ಹಾಗೂ ಶರಣ ಮಲ್ಲಿಕಾರ್ಜುನ ಬಡಿಗೇರ ಅವರನ್ನು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರು ಸನ್ಮಾನಿಸಿ ಗೌರವಿಸಿದರು.”
ಯಾದಗಿರಿ: ವಡಗೇರಾ ತಾಲೂಕಿನ ಸುಕ್ಷೇತ್ರ ಹೀರೆತುಮಕೂರ ಗ್ರಾಮದಲ್ಲಿ ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವದ ಅಂಗವಾಗಿ ಪ್ರಚಾರ ಕರಪತ್ರವನ್ನು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಹೀರೆತುಮಕೂರ ಗ್ರಾಮದಲ್ಲಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.
ಮಾರ್ಚ್ 12ರಂದು ಬೆಳಿಗ್ಗೆ 10 ಗಂಟೆಗೆ ಗಂಗಾಸ್ನಾನ ಕಾರ್ಯಕ್ರಮ ನಡೆಯಲಿದ್ದು, ನಂತರ ಚೌಡಯ್ಯನವರ ಪಲ್ಲಕ್ಕಿ ಉತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿಸಲಾಗುತ್ತದೆ. ಸಂಜೆ 6.30ಕ್ಕೆ ಭವ್ಯ ರಥೋತ್ಸವ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಾರ್ಚ್ 12 ಮತ್ತು 14ರಂದು “ರೈತ ಹರಿಸಿದ ರಕ್ತದೋಕುಳಿ” ಎಂಬ ಸಾಮಾಜಿಕ ನಾಟಕ ಪ್ರದರ್ಶನವೂ ಇರಲಿದೆ.ಮಾರ್ಚ್ 13ರಂದು ಗ್ರಾಮೀಣ ಕ್ರೀಡೆಗಳಾದ ಸಂಕ್ರಾಣಿಕಲ್ಲು ಹಾಗೂ ಉಸಕಿನ ಚೀಲ ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ನಶಿಸುತ್ತಿರುವ ಹಿನ್ನೆಲೆಯಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸಲು ಹಾಗೂ ದುಶ್ಚಟಗಳಿಂದ ದೂರವಿರಲು ಇಂತಹ ಕ್ರೀಡಾಕೂಟ ಗಳನ್ನು ಜಾತ್ರೆಯ ಅಂಗವಾಗಿ ಆಯೋಜಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಜಾತ್ರಾ ಮಹೋತ್ಸ ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚೌಡಯ್ಯನವರ ಕೃಪೆಗೆ ಪಾತ್ರರಾಗುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪವನ ಮುದ್ನಾಳ, ಭೀಮಾಶಂಕರ ಮಳ್ಳಳ್ಳಿ, ಚೌಡಯ್ಯ ಭಾವೂರು, ಶರಭಲಿಂಗ ಕಂಟೆಕಾಯಿ, ದೇವಪ್ಪ, ದೇವಪ್ಪ ಬಿಸೇಟಿ, ಯಂಕಪ್ಪ ಪೂಜಾರಿ, ಶಿವಪ್ಪ ನಾಟೆಕಾರ, ಚೆನ್ನಪ್ಪ ಮುಂದಲಮನಿ, ಯಂಕಪ್ಪ ಹಿರೇನೂರು, ಬಸವರಾಜ ಪಿಲ್ಲಿ, ಯಂಕಪ್ಪ ಮದನೂರು, ನಿಂಗಪ್ಪ ಪಿಲ್ಲಿ, ಸಾಬಣ್ಣ ಪಿಲ್ಲಿ, ಮೋನಪ್ಪ ಕೌಲೂರು, ಈಶಪ್ಪ ಕೌಲೂರು, ರಂಗಪ್ಪ ಬಾವೂರು, ತಿಮ್ಮಣ್ಣ ಇಟಗಿ, ಮಲ್ಲಪ್ಪ ಬಿಸೇಟಿ, ಲಗುಮನ್ನ ಬಿಸೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



