ಕಲಬುರಗಿಜಿಲ್ಲಾಸುದ್ದಿ

ನಿಶಾಂತ ಶಾಲೆಯ 19ನೇ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ಜರುಗಿತು

ಅಫಜಲಪುರ: ಪಟ್ಟಣದ ನಿಶಾಂತ ಹಿರಿಯ ಪ್ರಾಥಮಿಕ ಶಾಲೆಯ 19ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ ಮ್ಯಾಕೇರಿ ಮಾತನಾಡಿ, “ಶಾಲೆ ಸ್ಥಾಪಿಸುವುದು ಸುಲಭವಾದ ಕೆಲಸವಲ್ಲ. ಆದರೆ ಅದನ್ನು ವರ್ಷಗಳ ಕಾಲ ಶ್ರದ್ಧೆ, ನಿಷ್ಠೆ ಮತ್ತು ಗುಣಮಟ್ಟದ ಶಿಕ್ಷಣದೊಂದಿಗೆ ಮುಂದುವರಿಸುವುದು ಸವಾಲಿನ ಕೆಲಸ. ನಿಶಾಂತ ಶಾಲೆ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಸಂತೋಷದ ಸಂಗತಿ” ಎಂದರು.

“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪಾಠಪುಸ್ತಕದ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಉತ್ತಮ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯ. ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ದೇವಸ್ಥಾನಗಳಂತೆ ಕೆಲಸ ಮಾಡಬೇಕು” ಎಂದು ಅವರು ಹೇಳಿದರು.

ಸಾನಿಧ್ಯ ವಹಿಸಿದ್ದ ಅಳ್ಳಗಿ ಹಿರೇಮಠ (ಬಿ) ಶ್ರೀ ಶಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, “ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರ ಬೆಳೆದಾಗ ಮಾತ್ರ ಮಕ್ಕಳ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಸಿಸುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಪತ್ರಕರ್ತ ಹಾಗೂ ನೆರವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶಿವಣಗಿ ಮಾತನಾಡಿ, “ಪ್ರತಿಯೊಂದು ಮಗುವಿನಲ್ಲೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಶಿಕ್ಷಕರು ಪಾಠ ಹೇಳುವವರಷ್ಟೇ ಅಲ್ಲ, ಜೀವನದ ಮಾರ್ಗದರ್ಶಕರು ಕೂಡ” ಎಂದರು.“ವಿದ್ಯಾರ್ಥಿ ಜೀವನ ಅಮೂಲ್ಯ. ಈ ಅವಧಿಯಲ್ಲಿ ಬೆಳೆಸುವ ಜ್ಞಾನ, ಶಿಸ್ತು ಮತ್ತು ಸಂಸ್ಕಾರವೇ ಭವಿಷ್ಯವನ್ನು ನಿರ್ಧರಿಸುತ್ತದೆ. ಆತ್ಮವಿಶ್ವಾಸ ಮತ್ತು ಪರಿಶ್ರಮವೇ ಯಶಸ್ಸಿನ ಕೀಲಿಕೈ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ಸಾಯಿಬಣ್ಣ ಬೋರೆಗಾಂವ್ ವಹಿಸಿದ್ದರು. ಉದ್ಯಮಿ ಸಂತೋಷ ದಾಮಾ, ನಿವೃತ್ತ ಶಿಕ್ಷಕ ಯಶವಂತ ಬಡದಾಳ, ಮುಖ್ಯಗುರು ಭರತ ಚಿಕ್ಕಳಗಿ, ಸಂಚಾಲಕ ಹಣಮಂತ ಸೂರಗೊಂಡ, ಮುಖಂಡರಾದ ರಾಜಶೇಖರ ಹಿರೇಮಠ, ರಮೇಶ ಹೇರೂರ, ಕಲ್ಯಾಣಿ ಚಿಕ್ಕಳಗಿ, ಯಲ್ಲಾಲಿಂಗ ಬಸರಿಗಿಡ, ಕುಮಾರಗೌಡ ಬಿರಾದಾರ, ಶಿವಶರಣ ಕಣ್ಣಿ, ಮಳೆಪ್ಪ ಆರ್. ಡಾಂಗೆ, ಈರಣ್ಣ ಯಂಕಂಚಿ, ಡಿ.ಕೆ. ಶಿವು ಜಮಾದಾರ ಸೇರಿದಂತೆ ಶಿಕ್ಷಕರು, ಪಾಲಕರು ಉಪಸ್ಥಿತರಿ ದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೆಳೆದವು.ಕಾರ್ಯಕ್ರಮವನ್ನು ರಮೇಶ ಹೊಸಮನಿ ಹಾಗೂ ಸುಭಾಷ ಪ್ಯಾಟಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button