ಜಿಲ್ಲಾಸುದ್ದಿಯಾದಗಿರಿ

SIR ಪ್ರಕ್ರಿಯೆ ವಿರುದ್ಧ ಗೋಷ್ಠಿ:ಪೌರತ್ವ ಪ್ರಶ್ನೆ, ಪ್ರಭುತ್ವದ ಹುನ್ನಾರಗಳ ವಿರುದ್ಧ ತೀವ್ರ ಆಕ್ರೋಶ

ಶಹಾಪುರ: ಎಸ್‌ಐಆರ್ ಪ್ರಕ್ರಿಯೆ, ಪೌರತ್ವ ಪ್ರಶ್ನೆ ಹಾಗೂ ಪ್ರಜಾಪ್ರಭುತ್ವದ ಮೇಲೆ ಅದರ ಪರಿಣಾಮಗಳ ಕುರಿತು ಪಟ್ಟಣದಲ್ಲಿ ಭಾನುವಾರ ವಿಸ್ತೃತ ಸಂವಾದ ಗೋಷ್ಠಿ ನಡೆಯಿತು.

ಪಟ್ಟಣದ ಮಾತೋಶ್ರಿ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಯಾದಗಿರಿ ಮೇ ಸಾಹಿತ್ಯ ಮೇಳ ಬಳಗ, ದಲಿತ, ಪ್ರಗತಿಪರ, ರೈತ, ಅಲ್ಪಸಂಖ್ಯಾತ ಹಾಗೂ ಕಾರ್ಮಿಕ ಸಂಘಟನೆಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಸಮಿತಿ, ಶಹಾಪುರ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಸ್ತಾವಿಕವಾಗಿ ಮಾತನಾಡಿದ ಆರ್. ಚನ್ನಬಸ್ಸು ವನದುರ್ಗ, “ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರನ್ನು ಮತಪಟ್ಟಿಯಿಂದ ಹೊರಹಾಕುವ ಸಂಚು ನಡೆಯುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯುಂಟು ಮಾಡುವ ಪ್ರಯತ್ನ” ಎಂದು ಆರೋಪಿಸಿದರು.

ವಿಶೇಷ ಉಪನ್ಯಾಸ ನೀಡಿದ ಚಿಂತಕ ಶಿವಸುಂದರ, “ಎಸ್‌ಐಆರ್ ನಿಶಸ್ತ್ರ ಜನರ ಮೇಲೆ ನಡೆಯುತ್ತಿರುವ ದಾಳಿಯಂತಾಗಿದೆ. ಇದು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ; ವ್ಯವಸ್ಥಿತ ಮಿಷನ್ ಆಗಿದೆ” ಎಂದು ಕಿಡಿಕಾರಿದರು. 1947–49ರ ಸಂವಿಧಾನ ರಚನಾ ಕಾಲಘಟ್ಟವನ್ನು ಉಲ್ಲೇಖಿಸಿ, ಅಸಮಾನತೆಯ ವಿರುದ್ಧ ನಡೆದ ಹೋರಾಟದ ಫಲವೇ ಭಾರತೀಯ ಸಂವಿಧಾನ ಎಂದು ಹೇಳಿದರು.

“‘ಒಂದು ಓಟು–ಒಂದು ಮೌಲ್ಯ’ ಎಂಬ ತತ್ವವನ್ನು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಮತಪಟ್ಟಿಯೇ ಪ್ರಜಾಪ್ರಭುತ್ವದ ಮೂಲಾಧಾರ” ಎಂದು ಅವರು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, “ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ; ನಾಗರಿಕತ್ವದ ಪರಿಶೀಲನೆ. ಸಾಮಾನ್ಯ ಜನರಿಗೆ ಕಷ್ಟವಾಗುವ ರೀತಿಯಲ್ಲಿ ದಾಖಲೆಗಳನ್ನು ಕೇಳಲಾಗುತ್ತಿದೆ” ಎಂದು ಹೇಳಿದರು. ಸಂವಿಧಾನದ ಆರ್ಟಿಕಲ್ 5 ಪ್ರಕಾರ ಈ ದೇಶದಲ್ಲಿ ಹುಟ್ಟಿದವರೆಲ್ಲ ಭಾರತೀಯರು ಎಂಬುದನ್ನು ಅವರು ಉಲ್ಲೇಖಿಸಿದರು.

ಎನುಮರೇಷನ್ ಪ್ರಕ್ರಿಯೆಯಲ್ಲಿ 11 ವಿಧದ ದಾಖಲೆಗಳನ್ನು ಕೇಳಲಾಗುತ್ತಿದ್ದು, ಬ್ಯಾಂಕ್ ಹಾಗೂ ಅಂಚೆ ವ್ಯವಹಾರ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಆಸ್ತಿ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಒದಗಿಸುವುದು ಹಿಂದುಳಿದ ವರ್ಗದವರಿಗೆ ಕಷ್ಟಕರವಾಗಿದೆ ಎಂದು ಅಭಿಪ್ರಾಯಪಟ್ಟರು.

ಹೆಸರುಗಳಲ್ಲಿ ಅಲ್ಪ ವ್ಯತ್ಯಾಸಗಳನ್ನು ಆಧಾರವಾಗಿ ಮಾಡಿಕೊಂಡು ಮತದಾರರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದರು. “ಇದು ಬದುಕಿರುವ ವ್ಯಕ್ತಿಯನ್ನು ಸಾಮಾಜಿಕವಾಗಿ ಅಳಿಸುವಂತಹ ಕ್ರಮ” ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಈ ಪ್ರಕ್ರಿಯೆಗೆ ರಾಜಕೀಯ ಉದ್ದೇಶವಿದ್ದು, ಲಕ್ಷಾಂತರ ಜನರು ನಾಗರಿಕತ್ವ ಕಳೆದುಕೊಳ್ಳುವ ಅಪಾಯವಿದೆ” ಎಂದು ಅಭಿಪ್ರಾಯಪಟ್ಟರು.

ಚುನಾವಣಾ ಆಯೋಗದ ಪಾತ್ರವನ್ನೂ ಪ್ರಶ್ನಿಸಿದ ಅವರು, ಸಂವಿಧಾನದ ಆರ್ಟಿಕಲ್ 324 ಪ್ರಕಾರ ಸ್ವತಂತ್ರವಾಗಿರಬೇಕಾದ ಸಂಸ್ಥೆ ಆಡಳಿತದ ಪ್ರಭಾವಕ್ಕೆ ಒಳಗಾಗಿದೆ ಎಂದು ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ಮರೆಪ್ಪ ಚಟ್ಟೇಕರ್, “ಎಸ್‌ಐಆರ್ ಅತ್ಯಂತ ಗಂಭೀರ ವಿಷಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಹೇಳಿದರು.

ಗೋಷ್ಠಿಯಲ್ಲಿ ಗಿರೆಪ್ಪಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಪೂಜಾರಿ, ಚನ್ನಪ್ಪ ಆನೇಗುಂದಿ, ನೀಲಕಂಠ ಬಡಿಗೇರ, ಶಿವಣ್ಣ ಇಜೇರಿ, ದವಲಸಾಬ್ ನಧಾಫ್, ರಾಜು ಅಣಬಿ, ಸಣ್ಣನಿಂಗಣ್ಣ ನಾಯ್ಯೋಡಿ, ಸೈಯ್ಯದ್ ಉದ್ದಿನ್ ಖಾದ್ರಿ, ಶರೀಫ್ ಬಿಳೆಯಲಿ, ನೀಲಮ್ಮ ಮಲೈ, ಡಾ. ರವೀಂದ್ರನಾಥ ಹೊಸಮನಿ ಸೇರಿದಂತೆ ಹಲವರು ಭಾಗವಹಿಸಿ ಚರ್ಚೆಯಲ್ಲಿ ತೊಡಗಿಸಿಕೊಂಡರು.

ರಂಗನಾಥ ದೊರೆ ಕಾರ್ಯಕ್ರಮ ನಿರೂಪಿಸಿದರು. ಶರಣಬಸವ ಸ್ವಾಗತಿಸಿದರು, ವಿಶ್ವನಾಥ ನಾಟೇಕರ್ ವಂದಿಸಿದರು. ನಿಂಗಣ್ಣ ತಿಪ್ಪನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button