ಅಂಬೇಡ್ಕರ್ ಸಮಾನತೆಯ ಹರಿಕಾರ: ರಾಯಪ್ಪ ಯತ್ನಾಳ್

ಕೆಂಭಾವಿ: ಜಾತಿ, ಲಿಂಗ ಮತ್ತು ವರ್ಗಗಳ ಅಸಮಾನತೆಯ ವಿರುದ್ಧ ಹೋರಾಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ ಮಹಾನ್ ನಾಯಕರು ಎಂದು ಕೆಆರ್‌ಡಿಎಸ್‌ಎಸ್ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ರಾಯಪ್ಪ ಯತ್ನಾಳ್ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಚೌಕದಲ್ಲಿ ಅವರ 135ನೇ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ನಿವಾರಿಸಿ, ದಲಿತರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ಸಮಾನತೆ ತತ್ವವನ್ನು ಬೋಧಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವ ಗುರಿಯೊಂದಿಗೆ ಸಂವಿಧಾನ ರಚನೆ ಮಾಡಿದ ಅವರು, ಬಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದಾರಿಯೊಡ್ಡಿದರು ಎಂದು ಹೇಳಿದರು.
ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದ ಅಂಬೇಡ್ಕರ್ ಅವರ ಆಶಯದಿಂದ ಇಂದಿಗೂ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ಕೊಡಗಾನೂರು, ಶಿವಪ್ಪ ಕಂಬಾರ, ಮಲ್ಲು ವಠಾರ, ತಿಪ್ಪಣ ಬಿ. ಅಗ್ನಿ, ಮಹೇಶ್ ಸಿ. ಕಟ್ಟಿಮನಿ, ಸೈದಪ್ಪ ಕೆ. ಅರಳಗುಂಡಗಿ, ಹಣಮಂತ ಅಂಬರ್ಕೆಡ್, ಶೇಖಪ್ಪ ಇಂಗಳಗಿ, ಚಂದ್ರು ಕಟ್ಟಿಮನಿ, ಮಲ್ಲು ಬಾವಿಮನಿ, ಭೀಮಣ್ಣ ಸೀನಪ್ಪಮನಿ, ಸಿದ್ದಪ್ಪ ಕಂಬಾರ್, ಪರಶುರಾಮ್ ಕಡಕೋಳ, ಮಾಹದೇವಪ್ಪ ಬಸರಗಿಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.



