ಕಲಬುರಗಿಜಿಲ್ಲಾಸುದ್ದಿ

“ರಾಜ್ಯಪತ್ರ, ನ್ಯಾಯಾಲಯ ಆದೇಶ ಉಲ್ಲಂಘನೆ ಆರೋಪ: ತಳವಾರ ಸಮಾಜದಿಂದ ತಹಸೀಲ್ದಾರ ವಿರುದ್ಧ ಕ್ರಮಕ್ಕೆ ಆಗ್ರಹ”

ತಳವಾರರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡದೆ ಅನ್ಯಾಯ

ಕಲಬುರಗಿ: ತಳವಾರ ಸಮಾಜದ ಜನರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣ ಪತ್ರಗಳನ್ನು ನೀಡದೇ ತೊಂದರೆ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಫಜಲಪೂರ ತಾಲೂಕಿನ ಗ್ರೇಡ್-2 ತಹಸೀಲ್ದಾರರನ್ನು ಅಮಾನತು ಮಾಡಬೇಕು ಹಾಗೂ ನೈಜ ತಳವಾರ ಸಮಾಜದ ಅರ್ಹರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ಸರಳವಾಗಿ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಫಜಲಪೂರ ತಹಸಿಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಭಾರತ ಸರ್ಕಾರದ ರಾಜ್ಯಪತ್ರ (ಗಜೆಟ್), ಕರ್ನಾಟಕ ಸರ್ಕಾರದ ಆದೇಶಗಳು ಹಾಗೂ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶಗಳಿದ್ದರೂ ತಳವಾರ ಸಮಾಜದ ಜನರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅನಗತ್ಯ ವಿಳಂಬ ಮತ್ತು ತಿರಸ್ಕಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.

ಸಂಘದ ಮುಖಂಡರ ಪ್ರಕಾರ, 2020ರಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶಗಳಂತೆ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ. ಆದರೂ ಅಫಜಲಪೂರ ತಾಲೂಕಿನಲ್ಲಿ ಮಾತ್ರ ಕಳೆದ ಎರಡು ವರ್ಷಗಳಿಂದ ತಳವಾರ ಸಮುದಾಯದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.

ತಳವಾರ ಸಮಾಜದ ಜನರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಡಚಣೆ ಉಂಟುಮಾಡುತ್ತಿರುವ ಆರೋಪದ ಹಿನ್ನೆಲೆ ಗ್ರೇಡ್-2 ತಹಸೀಲ್ದಾರರ ವಿರುದ್ಧ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಲ್ಲದೆ, ತಳವಾರ ಸಮುದಾಯಕ್ಕೆ ಸಂಬಂಧಿಸಿದ ರಾಜ್ಯಪತ್ರಗಳು, ಸರ್ಕಾರಿ ಆದೇಶಗಳು ಹಾಗೂ ದಾಖಲೆಗಳನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಿ, ಅರ್ಹ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ವಿತರಿಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ ತಳವಾರ, ಅಂಬಣ್ಣ ನಾಯ್ಕೋಡಿ, ದೇವೇಂದ್ರ ಜಮಾದಾರ್, ಬಸವರಾಜ್ ಚೌಡಾಪುರ್, ಭೀಮರಾಯ ತಳವಾರ, ದತ್ತಪ್ಪ ಗೌರ್, ರವಿ ಗೌರ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button