ಅಂಗನವಾಡಿ ನೌಕರರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ಹೆಚ್.ಎಸ್. ಸುನಂದ

ಕಲಬುರಗಿ: ಅಂಗನವಾಡಿ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಬೇಕು ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಭಾಗವಾರು ಸಂಘಟನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ನೌಕರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಯು ಇನ್ನಷ್ಟು ಸದೃಢಗೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತ ಹೋರಾಟವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಗಾರದಲ್ಲಿ ಸಂಘಟನೆಯ ರಾಜ್ಯ ಖಜಾಂಚಿ ಜಿ. ಕಮಲಾ, ರಾಜ್ಯ ಕಾರ್ಯಾಧ್ಯಕ್ಷೆ ಶಾಂತ ಗಂಟೆ, ರಾಜ್ಯ ಉಪಾಧ್ಯಕ್ಷೆಯರಾದ ಗೌರಮ್ಮ ಪಾಟೀಲ್ ಹಾಗೂ ಶ್ರೀದೇವಿ ಚುಡೆ, ಹೆಚ್. ಪದ್ಮ (ರಾಯಚೂರು), ಅನಿತಾ ಹಿರೇಮಠ (ಯಾದಗಿರಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಬುರಗಿ, ರಾಯಚೂರು, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ 21 ತಾಲೂಕುಗಳಿಂದ ಆಗಮಿಸಿದ್ದ ಸುಮಾರು 210 ಮಹಿಳಾ ನಾಯಕಿಯರು ಮತ್ತು ಪದಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಸಂಘಟನಾ ಬಲವರ್ಧನೆ, ಸದಸ್ಯತ್ವ ವೃದ್ಧಿ, ನೌಕರರ ಹಕ್ಕುಗಳು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪದೊಂದಿಗೆ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. ಅಂಗನವಾಡಿ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಏಕತೆ ಮತ್ತು ಸಂಘಟಿತ ಹೋರಾಟದ ಅಗತ್ಯತೆಯನ್ನು ಕಾರ್ಯಗಾರದಲ್ಲಿ ಒತ್ತಿಹೇಳಲಾಯಿತು.




