ಜಿಲ್ಲಾಸುದ್ದಿಯಾದಗಿರಿ

ಕೆಂಭಾವಿಯಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ

ಕೆಂಭಾವಿ: ಪಟ್ಟಣದ ಮೂಲಭೂತ ಸೌಕರ್ಯಗಳ ಕೊರತೆ, ಬೀದಿ ದೀಪಗಳ ದುರಸ್ತಿ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಆರೋಪಿಸಿ ‘ನಮ್ಮ ಕರ್ನಾಟಕ ಸೇನೆ’ ಕೆಂಭಾವಿ ಹೋಬಳಿ ಘಟಕದ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಬಸವೇಶ್ವರ ವೃತ್ತದಿಂದ ಪುರಸಭೆ ಕಾರ್ಯಾಲಯದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯವರು ಮುಂದಿಟ್ಟ ಪ್ರಮುಖ ಬೇಡಿಕೆಗಳಲ್ಲಿ ಪಟ್ಟಣದಾದ್ಯಂತ ಹೂಳು ತುಂಬಿ ನಾರುತ್ತಿರುವ ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸುವುದು, ಸುರಪುರ–ಹುನಗುಂದ ರಾಜ್ಯ ಹೆದ್ದಾರಿಯಲ್ಲಿನ ದೋಷಪೂರಿತ ಬೀದಿ ದೀಪಗಳನ್ನು ಸರಿಪಡಿಸುವುದು ಹಾಗೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು ಸೇರಿವೆ. ಗುತ್ತಿ ಬಸವಣ್ಣ ನೀರಾವರಿ ಯೋಜನೆಯ ಕ್ಯಾನಲ್ ಬಳಿ ಸಮರ್ಪಕ ಬ್ರಿಡ್ಜ್ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೊತೆಗೆ ಪಟ್ಟಣದ ಪ್ರಮುಖ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸುವ ಬೇಡಿಕೆಯನ್ನು ಪುನರುಚ್ಚರಿಸಿದರು. “ಸಾರ್ವಜನಿಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಪುರಸಭೆ ಸಕಾರಾತ್ಮಕವಾಗಿ ಸ್ಪಂದಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಕೆಂಭಾವಿ ಅಧ್ಯಕ್ಷ ಶರಣು ಎಸ್. ದೇವರಮನಿ, ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಎಸ್. ಅಂಗಡಿ, ಗೌರವಾಧ್ಯಕ್ಷ ಬಸ್ಸು ಪರಸನಹಳ್ಳಿ, ಕಾರ್ಮಿಕ ಘಟಕದ ಉಪಾಧ್ಯಕ್ಷ ಶಿವು ರಬ್ಬನಳ್ಳಿ, ಮಲ್ಲಾಬಿ ಘಟಕದ ಅಧ್ಯಕ್ಷ ರಫೀಕ ಮುಜವಾರ, ಏವರು ಗ್ರಾಮದ ಅಧ್ಯಕ್ಷ ಬಾಪುಗೌಡ ಅನ್ವರ್ ಸೇರಿದಂತೆ ವೀರೇಶ, ಬಸ್ಸು ದೂರಿ, ಶ್ರೀಕಾಂತ ಕುಂಬಾರ, ಜಗ್ಗು ಮಾನವಿ, ಮಲ್ಲು ಹಂಗರಿಗಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button