ಪ್ರಿಯಾಂಕ್ ಖರ್ಗೆ ಡಿಸಿಎಂ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ
ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನಕ್ಕೆ ಒತ್ತಾಯ

ಚಿತ್ತಾಪುರ: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಕರ್ನಾಟಕ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಶುಕ್ರವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜೈಘೋಷಗಳನ್ನು ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಯುವ ನಾಯಕತ್ವದ ಅಗತ್ಯತೆ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಯುವಜನರ ಆಶೋತ್ತರಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರು ಜನರ ವಿಶ್ವಾಸ ಗಳಿಸಿರುವ ಶಕ್ತಿಶಾಲಿ ಯುವ ನಾಯಕರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆ ಅವರು ನೀಡುತ್ತಿರುವ ಕೊಡುಗೆ, ಹಿಂದುಳಿದ ವರ್ಗಗಳ ಏಳಿಗೆಗಾಗಿ ತೋರಿರುವ ಬದ್ಧತೆ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಶ್ರಮ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ರಾಜ್ಯದ ಜನರ ನಾಡಿಮಿಡಿತ ಅರಿತಿರುವ ನಾಯಕ ಪ್ರಿಯಾಂಕ್ ಖರ್ಗೆ. ಸರ್ಕಾರ ಮತ್ತು ಜನಸಾಮಾನ್ಯರ ಮಧ್ಯೆ ಸಾಮರಸ್ಯ ನಿರ್ಮಿಸುವಲ್ಲಿ ಅಪಾರ ಅನುಭವ ಹೊಂದಿರುವ ಅವರು ಸರಳತೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ವ್ಯಕ್ತಿತ್ವದಿಂದ ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಶಿವರುದ್ರಪ್ಪ ಭೀಣ್ಣಿ, ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಶೀಲಾ ಕಾಶಿ, ಜಗಣ್ಣಗೌಡ ರಾಮತೀರ್ಥ, ಬಸವರಾಜ ಚಿನ್ನಮಳ್ಳಿ, ನಾಗಯ್ಯ ಗುತ್ತೇದಾರ, ಹಣಮಂತ ಸಂಕನೂರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದಯಕುಮಾರ್ ಸಾಗರ ನಿರೂಪಿಸಿದರು. ಪಿಎಸ್ಐ ಮಂಜುನಾಥ ರೆಡ್ಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.



