ಕಲಬುರಗಿಜಿಲ್ಲಾಸುದ್ದಿ

ಐಎಎಸ್‌ ಸಾಧನೆಗೆ ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಕರೆ

ಕಲಬುರಗಿ:ಸರಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರು ದೃಢ ಸಂಕಲ್ಪ ಮತ್ತು ನಿರಂತರ ಪರಿಶ್ರಮದಿಂದ ರಾಷ್ಟ್ರ ಮಟ್ಟದ ಉನ್ನತ ಪರೀಕ್ಷೆಯಾದ ಐಎಎಸ್‌ ಅನ್ನು ಸುಲಭವಾಗಿ ಉತ್ತೀರ್ಣರಾಗಬಹುದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.

ನಗರದ ಜೇವರ್ಗಿ ಕಾಲೋನಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಲಬುರಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಳ ವಿಷಯವನ್ನು ಆಯ್ಕೆ ಮಾಡಿಕೊಂಡು ದೃಢ ನಿಷ್ಠೆಯಿಂದ ಅಧ್ಯಯನ ಮಾಡಿದರೆ ಯಾವುದೇ ವಿದ್ಯಾರ್ಥಿನಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.

ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳನ್ನು ವಿಸ್ತರಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೇವರ್ಗಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಅಷ್ಟಗೆ ವಿಶೇಷ ಉಪನ್ಯಾಸ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಹಾಗೂ ಬಸವಣ್ಣ ಅವರಂತಹ ಮಹನೀಯರು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮಹಿಳೆಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯಬೇಕೆಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ ಲೋಯಾ, ಜಿಲ್ಲಾ ಖಜಾಂಚಿ ಪದ್ಮಾಜಿ, ಕಾರ್ಯದರ್ಶಿ ರವೀಂದ್ರ ಶಹಾಬಾದಿ ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಚಟುವಟಿಕೆಗಳಿಗೆ ವಿಶೇಷ ಕೊಡುಗೆ ನೀಡಿದ ಡಾ. ಪ್ರೇಮಾ ಅಪಚಂದ, ಡಾ. ಜ್ಯೋತಿ ಬಳಗಾರ, ಡಾ. ಭಾಗೀರಥಿ ಹಣಮಂತರಾವ ಗುಡ್ಡೆವಾಡಿ, ಆಯಿಶಾ ಪಟೇಲ, ಸುಸ್ಮಾವತಿ ಪೂಜಾರಿ, ಡಾ. ನಸರೀನ್ ಖತೀಜಾ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಕ್ರೀಡೆ ಮತ್ತು ಸ್ಕೌಟ್ಸ್‌-ಗೈಡ್ಸ್‌ ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟ ದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಮೋರಗೆ ಪ್ರಕಾಶ ವಹಿಸಿದ್ದರು. ಜಿಲ್ಲಾಧಿಕಾರಿಗಳಿಂದ ವಿದ್ಯಾರ್ಥಿನಿಯರಿಗೆ ದೊರೆತ ಪ್ರೇರಣೆ ಶ್ಲಾಘನೀಯ ಎಂದು ಹೇಳಿದರು.

ವಿದ್ಯಾರ್ಥಿನಿಯರಾದ ಕನ್ಯಾಕುಮಾರಿ ಹಾಗೂ ತಂಡದವರು ಸ್ವಾಗತ ಗೀತೆಯನ್ನು ಹಾಡಿದರು. ಡಾ. ಮೀನಾಕ್ಷಿ ವಿಜಯಕುಮಾರ ಸ್ವಾಗತಿಸಿದರು. ಡಾ. ಪದ್ಮರಾಜ ರಾಸಣಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ. ಶಹನಾಜ್ ಬೇಗಂ ವಂದನಾರ್ಪಣೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button