ಹೋಳಿ ವೇಳೆ ಚಿತ್ರೀಕರಿಸಿದ ವಿಡಿಯೋ ವೈರಲ್: ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಚಿತ್ರೀಕರಿಸಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಹೋಳಿ ಹಬ್ಬದ ಸಂದರ್ಭದಲ್ಲಿ ಕೆಲ ಯುವಕರು ಹಾಸ್ಯಪ್ರಾಯವಾಗಿ ಕಾರ್ಯಕ್ರಮ ನಡೆಸಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಿಜಾಬ್ ಧರಿಸಿ ಗರ್ಭಿಣಿಯಂತೆ ನಟಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಇದರಿಂದ ಕೆಲವರಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸ್ಥಳೀಯ ಸಂಘಟನೆಯ ಪದಾಧಿಕಾರಿ ಸಮೀರ್ ಅವಟಿ ಅವರು ನಿಂಬರ್ಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಜ್ವಲ್ ಬೆಳಮಗಿ, ಶಾಂತಪ್ಪ ಮನಮತಿ, ನಾಗರಾಜ ಗವಣ್ಣಗೊಳ, ಅನೀಲ ನಡಗಡ್ಡಿ ಹಾಗೂ ಚನ್ನು ದುಗೊಂಡ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಕೆಲವು ಗುರುತಿಸದ ವ್ಯಕ್ತಿಗಳ ಬಗ್ಗೆ ಕೂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಘಟನೆ ಹಿನ್ನೆಲೆ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ಶಾಂತಿ ಕಾಪಾಡಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



