ಶರಣಬಸಪ್ಪಗೌಡ ದರ್ಶನಾಪೂರಗೆ ಡಿಸಿಎಂ ಸ್ಥಾನ ಕೊಡಿ! | ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯ

ಕೆಂಭಾವಿ: ಕೊಟ್ಟ ಮಾತಿನಂತೆ ಅಧಿಕಾರ ತ್ಯಜಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದರ್ಶ ರಾಜಕಾರಣಕ್ಕೆ ಮಾದರಿಯಾಗಿದ್ದು, ಜನಪರ ಆಡಳಿತದ ಮೂಲಕ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಶರಣಬಸಪ್ಪಗೌಡ ದರ್ಶನಾಪೂರ ಅಭಿಮಾನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಪ್ರಶಾಂತ ದೊಡ್ಡಮನಿ (ಚಿಂಚೋಳಿ) ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಿಕೆ. ಶಿವಕುಮಾರ್ಅ ವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಅಧಿಕಾರ ಹಂಚಿಕೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿದ್ದಾರೆ. ಆದರೆ ಮತ್ತೊಂದೆಡೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಕಲ್ಯಾಣ ಕರ್ನಾಟಕದ ಜನನಾಯಕ, “ಸಿಂಪಲ್ ಮಿನಿಸ್ಟರ್” ಎಂದೇ ಖ್ಯಾತರಾಗಿರುವ ಶರಣಬಸಪಗೌಡ ದರ್ಶನಾಪೂರ ಅವರು ನಾಲ್ಕು ದಶಕಗಳಿಂದ ಹಿಂದುಳಿದ ಭಾಗದ ಶಿಕ್ಷಣ, ನೀರಾವರಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ-ಮತ ಭೇದವಿಲ್ಲದೆ ಎಲ್ಲರ ಪ್ರೀತಿ ಗಳಿಸಿರುವ ಅಜಾತಶತ್ರುವಾದ ದರ್ಶನಾಪೂರ ಅವರಿಗೆ ನೂತನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಜೊತೆಗೆ ಮಹತ್ವದ ಖಾತೆ ನೀಡಿ ಜನಸೇವೆಗೆ ಮತ್ತೊಂದು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಇದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ದೊರೆಯುವುದರ ಜೊತೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಲಿದೆ ಎಂದು ಪ್ರಶಾಂತ ದೊಡ್ಡಮನಿ ಅಭಿಪ್ರಾಯಪಟ್ಟಿದ್ದಾರೆ.




