ಬಿಜೆಪಿ–ಕಾಂಗ್ರೆಸ್ಗೆ ದೆಹಲಿ ಹೈಕಮಾಂಡ್; ನಮ್ಮ ಪಕ್ಷದಲ್ಲಿ ಆ ಸಂಸ್ಕೃತಿ ಇಲ್ಲ’: ಮಹಾದೇವ ಜಾನಕರ್
ಆರ್ಎಸ್ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ಗೆ ಅಭಿನಂದನೆ

ಸಂವಿಧಾನಕ್ಕೆ ಆಗಾಗ ಧಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಸಂರಕ್ಷಣೆಗೆ ನಾವು ಎಲ್ಲರೂ ಹೋರಾಡುವುದು ಅನಿವಾರ್ಯವಾಗಿದೆ. ಹಿಂದುಳಿದ ವರ್ಗಗಳು ಜಾಗೃತರಾಗಿ ರಾಜಕೀಯವಾಗಿ ಸಂಘಟಿತರಾಗಬೇಕು. ರಾಜ್ಯದಲ್ಲಿ ಕಾಂತಾರಾಜು ಆಯೋಗದ ವರದಿ ಜಾರಿಗೆ ಬಂದಾಗ ಮಾತ್ರ ಹಿಂದುಳಿದ ವರ್ಗಗಳಿಗೆ ನಿಜವಾದ ಶಕ್ತಿ ಸಿಗಲಿದೆ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಆರ್ಎಸ್ಪಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತಿಸಲಾಗಿದೆ.- ಆರ್ಎಸ್ಪಿ ರಾಷ್ಟ್ರೀಯ ಅಧ್ಯಕ್ಷ, ಶಿವಲಿಂಗಪ್ಪ ಕಿನ್ನೂರ.
ಕಲಬುರಗಿ:ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ದೆಹಲಿ ಹೈಕಮಾಂಡ್ ಪ್ರಭಾವ ಹೆಚ್ಚಿದ್ದರೂ, ನಮ್ಮ ರಾಷ್ಟ್ರೀಯ ಸಮಾಜ ಪಕ್ಷದಲ್ಲಿ ಅಂತಹ ಸಂಸ್ಕೃತಿ ಇಲ್ಲ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಜಾನಕರ್ ಹೇಳಿದ್ದಾರೆ.
ನಗರದ ಹೊಸ ಜೇವರ್ಗಿ ರಸ್ತೆಯ ಖಾಸಗಿ ಸಭಾಂಗಣ ದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಅಸ್ಸಾಂ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ನಾಲ್ಕು ಶಾಸಕರು, 95 ಕಾರ್ಪೋರೇಟರ್ಗಳು ಹಾಗೂ ಗುಜರಾತ್ನಲ್ಲಿ 28 ಕಾರ್ಪೋರೇಟರ್ಗಳ ಬೆಂಬಲವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿಂದುಳಿದ ಕೋಲಿ, ಕಬ್ಬಲಿಗ, ಬಾರ್ಕಿ, ಮೊಗವೀರ ಹಾಗೂ ಬೆಸ್ತ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೇಂದ್ರಕ್ಕೆ ಶಿಫಾರಸು ಸಲ್ಲಿಸುವ ಸಾಧ್ಯತೆ ಇದೆ ಎಂದರು.
ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಶೀಘ್ರದಲ್ಲೇ ದೆಹಲಿಗೆ ನಿಯೋಗ ಕರೆದೊಯ್ಯುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಶೋಷಿತ ವರ್ಗಗಳ ಆಶೋತ್ತರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿದ್ದು, ಓಬಿಸಿ ವರ್ಗಗಳು ಒಗ್ಗೂಡಬೇಕಾಗಿದೆ ಎಂದು ಅವರು ಕರೆ ನೀಡಿದರು. ಸಮಾಜ ನಿರ್ಮಾಣದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಮಹತ್ವದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಪ್ರಶಂಸಿಸಿದರು.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಾಳಕೃಷ್ಣ ಅಕ್ಕಿಸಾಗರ ಮಾತನಾಡಿದರು.
ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಮುಕ್ಕಾ ಅಧ್ಯಕ್ಷತೆ ವಹಿಸಿದರು.ಆರ್ಎಸ್ಪಿ ಎಂಪ್ಲಾಯ್ಸ್ ಫೆಡರೇಷನ್ ಅಧ್ಯಕ್ಷ ಸಿದ್ಧಪ್ಪ ಅಕ್ಕಿಸಾಗರ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ನೀಲಕಂಠ ಜಮಾದಾರ್ ಕಾರ್ಯಕ್ರಮ ನಿರೂಪಿಸಿದರು. ದೇವಿಂದ್ರ ಚಿಗರಳ್ಳಿ ಸ್ವಾಗತಿಸಿದರು. ಯಲ್ಲಪ್ಪ ತಳವಾರ ಅತಿಥಿ ಪರಿಚಯಿಸಿದರು. ಶಂಕರ ಕಟ್ಟಿಸಂಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾಶಂಕರ ಡಾಂಗೆ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿವಶರಣಪ್ಪ ಕೋಬಾಳ, ವಸಂತರಾವ ನರಿಬೋಳ, ಶಾಂತಪ್ಪ ಕೂಡಿ, ಸೂರ್ಯಕಾಂತ ಗುಡ್ಡೊಡಗಿ, ಸಾಬಣ್ಣ ವಡಗೇರಿ, ಚಂದ್ರಶೇಖರ ಭಂಕಲಗಿ, ಬಸವರಾಜ ಮೊರಟಗಿ, ಬಾಬುರಾವ ಬಾದನಹಳ್ಳಿ, ಶ್ಯಾಮಕುಮಾರ ಸಂಗಾವಿ, ಶರಣಪ್ಪ ದೊಡ್ಡಮನಿ, ಜಯಶ್ರೀ ಕಿರಣಗಿ, ರಾಜೇಂದ್ರ ರಾಜವಾಳ, ಶ್ರೀಮಂತ ಮಾವನೂರ್, ದಿಗಂಬರ ರಾಠೋಡ, ಬಾಬುರಾವ ಡೊಳ್ಳೆಗೌಡ್ರ, ದಿಗಂಬರ ಕಾಡಪ್ಪಗೋಳ ಸೇರಿದಂತೆ ಹಲವರು ಭಾಗವಹಿಸಿದರು.


