ಕಲಬುರಗಿ

ಗ್ರಂಥಾಲಯ ಜ್ಞಾನದ ಭಂಡಾರ: ಮಲ್ಲಪ್ಪ ಹೊಸ್ಮನಿ

ಇಂಗನಕಲದಲ್ಲಿ ನೂತನ ಗ್ರಂಥಾಲಯ ಉಪ ಕೇಂದ್ರ ಉದ್ಘಾಟನೆ

ಚಿತ್ತಾಪುರ: ಮನುಷ್ಯನ ಜ್ಞಾನ ವೃದ್ಧಿಗೆ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯವು ಜ್ಞಾನದ ಭಂಡಾರವಾಗಿದ್ದು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ ಹೇಳಿದರು.

ತಾಲೂಕಿನ ಇಂಗನಕಲ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಗ್ರಂಥಾಲಯ ಉಪ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುತುವರ್ಜಿಯಿಂದ ಗ್ರಾಮಕ್ಕೆ ಗ್ರಂಥಾಲಯ ದೊರೆತಿರುವುದು ಶ್ಲಾಘನೀಯ ಎಂದು ಹೇಳಿದರು.

“ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ, ಅದು ಜ್ಞಾನದ ದೇವಾಲಯವಾಗಿದೆ. ಇಲ್ಲಿನ ಪುಸ್ತಕಗಳು ನಮ್ಮ ಚಿಂತನೆಗೆ ಹೊಸ ದಿಕ್ಕು ನೀಡುತ್ತವೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಸ್ವಯಂ ಅಧ್ಯಯನದ ಮನೋಭಾವ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದರು.

ಗ್ರಾಮದಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ಪತ್ರಿಕೆ, ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು, ಪತ್ರಿಕೆಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ನಾಯಕ ಮಾತನಾಡಿದರು. ಗುಂಡಗುರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಬಣ್ಣಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಮಗಿ, ಮಾಜಿ ಸದಸ್ಯ ಈರಣ್ಣ ದಂಡೋತಿ, ದೇವಾನಂದ ಮಂಗಲಗಿ, ರುಕಮಶಾ ದುಕಾನದಾರ, ಹಾಜಿಸಾಬ ದುಕಾನದಾರ, ಮಲ್ಲಪ್ಪ ನಿಡಗುಂದಿ, ಶಿವಯೋಗಿ ಹೊಸಮನಿ, ಶರಣಪ್ಪ ಕದ್ದರಗಿ, ನಾಗರಾಜ ಬಂಡಿವಡ್ಡರ, ಕಲ್ಯಾಣಿ ಪೂಜಾರಿ, ದೀಪಕ ಹೊಸಮನಿ, ಯಲ್ಲಾಲಿಂಗ ನಿಡಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button