ಕೆಂಭಾವಿ ಪುರಸಭೆ ಹೊರಗುತ್ತಿಗೆ ನೇಮಕಾತಿಯಲ್ಲಿ ಹಣದ ಬೇಡಿಕೆ ಆರೋಪ: ತನಿಖೆಗೆ ಡಿ.ಎಸ್.ಎಸ್ ಒತ್ತಾಯ

ಕೆಂಭಾವಿ: ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹಣದ ಬೇಡಿಕೆ ನಡೆಯುತ್ತಿದೆ ಎಂದು ಕೆಡಿಎಸ್‌ಎಸ್ (ಅಂಬೇಡ್ಕರವಾದ) ಸಂಘಟನೆ ಆರೋಪಿಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಂಘಟನೆಯು ನೀಡಿರುವ ಮನವಿಯಲ್ಲಿ, ಪುರಸಭೆಯ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಎನ್‌ಜಿಒ ಸಂಸ್ಥೆಯ ಮೂಲಕ ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ ಕೆಲ ದಲ್ಲಾಳಿಗಳ ಮೂಲಕ ಅಭ್ಯರ್ಥಿಗಳಿಂದ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪೌರಕಾರ್ಮಿಕರ ಹುದ್ದೆ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ₹2 ಲಕ್ಷದಿಂದ ₹3 ಲಕ್ಷದವರೆಗೆ ಹಣ ಕೇಳಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಷ್ಟವಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಸಂಬಂಧಿತ ಎನ್‌ಜಿಒ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಗತ್ಯವಿದ್ದಲ್ಲಿ ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಪಾರದರ್ಶಕ ರೀತಿಯಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯುವಂತೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ತಿಪ್ಪಣ್ಣ ಬಿ. ಅಗ್ನಿ, ರಾಯಪ್ಪ ಯತ್ನಾಳ, ಮಾಳಪ್ಪ ಯತ್ನಾಳ, ಮಹೇಶ್ ಕಟ್ಟಿಮನಿ, ಹಣಮಂತ ಅಂಬರ್ಕೆಡ್ ಹಾಗೂ ಇತರರು ಉಪಸ್ಥಿತರಿದ್ದರು.




