ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಲು ದೇವು ಯಾಬಾಳ ಒತ್ತಾಯ

ಚಿತ್ತಾಪುರ: ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಖಾತೆಗಳನ್ನು ನಿರ್ವಹಿಸುತ್ತಿರುವ ಪ್ರಿಯಾಂಕ್ ಖರ್ಗೆರವರನ್ನು ನೂತನ ಸರ್ಕಾರದಲ್ಲಿ ಉಪಮುಖ್ಯ ಮಂತ್ರಿಯನ್ನಾಗಿ ನೇಮಿಸಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣಗಳನ್ನು ಅಂಕಿ ಅಂಶಗಳ ಸಹಿತ ಜನರ ಮುಂದಿಟ್ಟಿದ್ದಲ್ಲದೇ ಪಿಎಸ್ಐ ಹಗರಣ ಹಾಗೂ ಬಿಟ್ಟ್ ಕಾಯಿನ್ ಹಗರಣ, 40 ಪರ್ಸೆಂಟ್ ಕಮಿಷನ್ ಹಗರಣ ಹೀಗೆ ಇನ್ನು ಅನೇಕ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸದನದ ಒಳಗೆ ಮತ್ತು ಹೊರಗೆ ಹೋರಾಟಗಳನ್ನು ಮಾಡಿ ಬಿಜೆಪಿ ಸರ್ಕಾರದ ಪತನಕ್ಕೆ ಕಾರಣಿಭೂತರಾಗಿದ್ದಾರೆ. ಅಲ್ಲದೇ ರಾಜ್ಯ ದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಇವರ ಕೊಡುಗೆ ಅಪಾರವಾಗಿದೆ.
ಪ್ರಿಯಾಂಕ್ ಖರ್ಗೆರವರು ಅತೀ ಕಿರಿಯ ವಯಸ್ಸಿನಲ್ಲಿಯೇ ಶಾಸಕರಾಗಿ 3 ಬಾರಿ ಆಯ್ಕೆಯಾಗಿರುವುದಲ್ಲದೇ ಸರ್ಕಾರದಲ್ಲಿ ಸಚಿವರಾಗಿ ಪ್ರವಾಸೋದ್ಯಮ, ಐಟಿ-ಬಿಟಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಅಂತಹ ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸುವದಲ್ಲದೇ ತಮ್ಮ ಇಲಾಖೆಯಡಿ ಯುವ ಜನತೆಗೆ ಅನುಕೂಲವಾಗುವ ಯೊಜನೆಗಳನ್ನು ಜಾರಿಗೆ ತಂದು ಜನಪ್ರಿಯರಾಗಿದ್ದಾರೆ ಎಂದು ಹೇಳಿದರು.
ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವು ಬೇರು ಮಟ್ಟದಲ್ಲಿ ಸಂಘಟಿತವಾಗಲು ಇವರ ಕೊಡುಗೆ ಸಾಕಷ್ಟಿದೆ. ಸದಾ ಅಭಿವೃದ್ಧಿಯ ಚಿಂತಕರಾಗಿದ್ದು ತಾವು ಪ್ರತಿನಿದಿಸುವ ಚಿತ್ತಾಪುರ ಮತಕ್ಷೇತ್ರವನ್ನು ಅಭಿವೃದ್ಧಿ ಪರ್ವವನ್ನು ಮಾಡಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ಎಜುಕೇಶನ್ ಹಬ್, ಮತ್ತು ಸೈನ್ಸ್ ಸೆಂಟರ್ ಹಾಗೂ ಪಟ್ಟಣದಲ್ಲಿ ವಿಶಾಲವಾದ ಕ್ರೀಡಾಂಗಣ ಮಾಡಿದ್ದಾರೆ. ಅಲ್ಲದೇ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇಡೀ ರಾಜ್ಯದಲ್ಲೇ ಚಿತ್ತಾಪುರ ಮತ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಹೊಳೆಯನೇ ಹರಿಸಿದ ಪ್ರಿಯಾಂಕ್ ಖರ್ಗೆ ಅವರು ಇಂತಹ ಉತ್ಸಹಿ ರಾಜಕಾರಣಿಯಾಗಿರುವ ಪ್ರಿಯಾಂಕ್ ಖರ್ಗೆರವರಿಗೆ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ ಕಲ್ಯಾಣ ಕರ್ನಾಟಕಭಾಗದಲ್ಲಿ ಪಕ್ಷವು ಇನ್ನಷ್ಟು ಬಲಿಷ್ಟವಾಗಲು ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ.




