ಬಸವ ಜಯಂತಿಗೆ ಬಸವ ಭವನ, ವಸತಿ ನಿಲಯ ನಿರ್ಮಾಣಕ್ಕೆ ಅಡಿಗಲ್ಲು: ನಾಗರೆಡ್ಡಿ ಪಾಟೀಲ ಕರದಾಳ

ಚಿತ್ತಾಪುರ: ಪಟ್ಟಣದಲ್ಲಿ ಸುಸಜ್ಜಿತ ಬಸವ ಭವನ ಹಾಗೂ ಸಮಾಜದ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ಬಸವ ಜಯಂತಿಯ ದಿನದಂದು ಅಡಿಗಲ್ಲು ಮಾಡಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಹೊರವಲಯದ ಶಹಾಬಾದ ರಸ್ತೆಯಲ್ಲಿರುವ ಬಸವ ಭವನಕ್ಕಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಭಾನುವಾರ ನಡೆದ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳ ಹಾಗೂ ವೀರಶೈವ ಸಮಾಜದ ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವ ಭವನ ನಿರ್ಮಾಣಕ್ಕಾಗಿ ಈಗಾಗಲೇ ಪಟ್ಟಣದ ಶಹಾಬಾದ ರಸ್ತೆಯಲ್ಲಿ 2 ಎಕರೆ ಭೂಮಿಯನ್ನು ಖರೀದಿಸಲಾಗಿದೆ.
ಯಾವುದೇ ಒತ್ತಡ ಇಲ್ಲದೇ ಟ್ರಸ್ಟ್‌ನಲ್ಲಿ ಮುಕ್ತ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. 2 ಲಕ್ಷ ರೂ. ದೇಣಿಗೆ ನೀಡುವವರು ಸದಸ್ಯರಾಗಲು ಅರ್ಹರಾಗಿದ್ದು, ಬಸವ ಜಯಂತಿ ಒಳಗಾಗಿ ಸದಸ್ಯರಾಗಲು ಅವಕಾಶವಿದ್ದು, ಈಗಾಗಲೇ 33 ಗಣ್ಯರು ಸದಸ್ಯತ್ವ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಬಸವ ಭವನದ ಜೊತೆಗೆ 50 ವಿದ್ಯಾರ್ಥಿನಿಯರ ವಸತಿ ನಿಲಯಕ್ಕಾಗಿ 10 ಕೋಣೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 2 ಲಕ್ಷ ದೇಣಿಗೆ ನೀಡಿದವರ ಹೆಸರು ಕೋಣೆಗೆ ಹೆಸರು ಇಡಲಾಗುವುದು ಹಾಗೂ 1 ಲಕ್ಷ ದೇಣಿಗೆ ನೀಡಿದವರ ಕುಟುಂಬದವರಿಗೆ ಮದುವೆ ಸಮಾರಂಭಕ್ಕೆ ಭವನ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಚಿತ್ತಾಪುರ ಪಟ್ಟಣದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ 20 ವರ್ಷಗಳ ಹಿಂದೆಯೇ ಟ್ರಸ್ಟ್ ರಚನೆ ಮಾಡಿದ್ದು, ನಂತರದ ದಿನಗಳಲ್ಲಿ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಸಾಮಾಜಿಕ ಚಟುವಟಿ ಕೆಗಳನ್ನು ಮಾಡುತ್ತಾ ಬರಲಾಗಿತ್ತು.
ಕೋರೋನಾ ಸಂದರ್ಭದಲ್ಲಿ ಜನರ ಆಸಕ್ತಿ ಕಡಿಮೆಯಾದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯ ಕೈಬಿಡಲಾಗಿದೆ. ಜಿಲ್ಲೆಯಲ್ಲಿಯೇ ತಾಲೂಕು ಕೇಂದ್ರ ಸ್ಥಾನದಲ್ಲಿ ಮೊಟ್ಟ ಮೊದಲು ಬಸವೇಶ್ವರ ಮೂರ್ತಿ ಸ್ಥಾಪನೆ ಮಾಡಿದ್ದು ಚಿತ್ತಾಪುರದಲ್ಲಿ ಎಂದು ಹೇಳಿದರು.
ಸುಸಜ್ಜಿತ ಬಸವ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಮಾಡಲಾಗುವುದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.11 ಲಕ್ಷ ದೇಣಿಗೆ ನೀಡಿದವರ ಹೆಸರು ವಸತಿ ನಿಲಯಕ್ಕೆ ಇಡಲಾಗುವುದು ಸಭೆಯಲ್ಲಿ ಹೇಳುತ್ತಿದ್ದಂತೆ ಶರಣಪ್ಪ ಸಾಹು ಹೊಟ್ಟಿ ಬೊಮ್ಮನಳ್ಳಿ ಅವರು 11 ಲಕ್ಷ ದೇಣಿಗೆ ನೀಡಲು ಮುಂದೆ ಬಂದು, ಸ್ಥಳದಲ್ಲಿಯೇ 50 ಸಾವಿರ ಹಣ ನೀಡಿದರು.
ಶೈಕ್ಷಣಿಕವಾಗಿ ವೀರಶೈವ ಲಿಂಗಾಯತ ಸಮಾಜ ಹಿಂದುಳಿದಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ 10 ಕೊಠಡಿಗಳ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮುಖಂಡ ಅಂಬರೀಷ್ ಸುಲೇಗಾಂವ್ ಮಾತನಾಡಿ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವವರಿಗೆ ಟ್ರಸ್ಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಇದೇ ವೇಳೆ ಬಸವರಾಜ ಕೊಳ್ಳಿ ಅವರು 2 ಲಕ್ಷ ರೂ. ದೇಣಿಗೆ ನೀಡಿ ಟ್ರಸ್ಟಿಯಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ ಮುಡಬೂಳ, ಡಾ.ಚಂದ್ರಶೇಖರ ಕಾಂತಾ, ಅಶೋಕ ನಿಪ್ಪಾಣಿ, ಮಲ್ಲರೆಡ್ಡಿ ಗೋಪಸೇನ್, ಶ್ರೀನಿವಾಸ ರೆಡ್ಡಿ ಪಾಲಪ್, ಎಸ್.ಎನ್.ಪಾಟೀಲ, ಬಸವರಾಜ ಸಂಕನೂರ, ಅನೀಲ್ ವಡ್ಡಡಗಿ, ಶಾಂತಕುಮಾರ್ ಹತ್ತಿ, ವಿಶ್ವಾರಾಧ್ಯ ಪಾಟೀಲ, ಪ್ರಭುದೇವ್ ಬೊಮ್ಮನಳ್ಳಿ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ಬಸವರಾಜಗೌಡ ದೇಶಮುಖ, ಶೈಲುಗೌಡ ದಿಗ್ಗಾಂವ, ರವಿ ಗೊಬ್ಬುರ, ಶರಣು ಸಜ್ಜನಶೆಟ್ಟಿ, ಶಿವರಾಜ್ ಪಾಳೇದ್, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ವಿಶಾಲ ದಂಡಗುಂಡ, ರಾಜಶೇಖರ ಯದಲಾಪುರ್ ಸೇರಿದಂತೆ ಇತರರು ಇದ್ದರು.



