Kalaburagi |ವಿಶ್ವ ರೆಡ್ ಕ್ರಾಸ್ ದಿನಾಚರಣೆ ಸಂಭ್ರಮ | ಸಾಧಕರಿಗೆ ಸನ್ಮಾನ, ರಕ್ತನಿಧಿಗೆ ಮಹತ್ವದ ಘೋಷಣೆ

ಕಲಬುರಗಿ: ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಣ್ಯರು, ವಿಶ್ವದ ಅನೇಕ ಮಾನವೀಯ ಸೇವಾ ಸಂಘಟನೆಗಳಿಗೆ ಪ್ರೇರಣೆಯಾಗಿರುವ ಹೆನ್ರಿ ಡುನಂಟ್ ಅವರು 1901ರಲ್ಲಿ ಪ್ರಪ್ರಥಮ ನೋಬಲ್ ಪ್ರಶಸ್ತಿ ಪಡೆದ ವಿಶ್ವಮಾನವ ಎಂದು ಬಣ್ಣಿಸಿದರು. ಆರೋಗ್ಯ ಹಾಗೂ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಗ್ರಪಂಥಿಯಾಗಿದೆ ಎಂದು ಹೇಳಿದರು.
ಜಿಲ್ಲೆಗೆ ರಕ್ತನಿಧಿ ಶಾಖೆ ಮಂಜೂರಾಗಿರುವುದು ಬಡಜನತೆಗೆ ವರದಾನವಾಗಲಿದ್ದು, ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ಒದಗಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ ಲೋಯಾ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ರೆಡ್ ಕ್ರಾಸ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕರನ್ನು ಅಭಿನಂದಿಸಿದರು. ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ರಾಮನಗರ, ಧಾರವಾಡ ಜಿಲ್ಲಾ ಸಭಾಪತಿ ಮಹಾಂತೇಶ್ ಹಾಗೂ ವಿಟಿಯು ಪ್ರಾದೇಶಿಕ ನಿರ್ದೇಶಕಿ ಡಾ. ಶುಭಾಂಗಿ ಡಿ.ಸಿ. ಮಾತನಾಡಿದರು. ಅತಿಥಿಗಳಾದ ಡಾ. ಅಪ್ಪಾರಾವ ಅಕ್ಕೋಣೆ ರೆಡ್ ಕ್ರಾಸ್ ಸಂಸ್ಥೆಯ ಇತಿಹಾಸವನ್ನು ವಿವರಿಸಿದರು. ಡಾ. ಶಂಕರಪ್ಪ ಹತ್ತಿರ ಅವರು ಸಹ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಉಪಸಭಾಪತಿ ಶ್ರೀಮತಿ ಭಾಗ್ಯಲಕ್ಷ್ಮೀ ಎಂ., ಖಜಾಂಚಿ ಜಿ.ಎಸ್. ಪದ್ಮಾಜಿ, ಕಾರ್ಯದರ್ಶಿ ರವೀಂದ್ರ ಶಾಬಾದಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ರೆಡ್ ಕ್ರಾಸ್ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ನಡೆಸಿದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಆಳಂದ ಸಮತಾ ಆಯುರ್ವೇದ ಮಹಾವಿದ್ಯಾಲಯ, ನೂತನ ವಿದ್ಯಾಲಯ ಕಲಬುರಗಿ ಹಾಗೂ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೆಯೇ ಯುವ ರೆಡ್ ಕ್ರಾಸ್ ಚಟುವಟಿಕೆಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಡಾ. ಪದ್ಮರಾಜ ರಾಸಣಗಿ, ಡಾ. ಬಸವರಾಜ ಹಿರೇಮಠ ಹಾಗೂ ಡಾ. ಶರಣಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಯುವ ರೆಡ್ ಕ್ರಾಸ್ ಸಮಿತಿ, ರಕ್ತದಾನ ಸಮಿತಿ, ಪ್ರಥಮ ಚಿಕಿತ್ಸೆ ಸಮಿತಿ ಹಾಗೂ ಜೂನಿಯರ್ ರೆಡ್ ಕ್ರಾಸ್ ಸಮಿತಿಗಳ ಸಂಚಾಲಕರಾದ ಡಾ. ಪದ್ಮರಾಜ ರಾಸಣಗಿ, ಡಾ. ಸಯ್ಯದ ಸನಾವುಲ್ಲಾ, ಸುರೇಶ್ ಬಡಿಗೇರ ಹಾಗೂ ಕಲ್ಯಾಣಕುಮಾರ ಶೀಲವಂತ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
₹25 ಸಾವಿರ ರೆಡ್ ಕ್ರಾಸ್ ಪೋಷಕ ಸದಸ್ಯತ್ವ ಪಡೆದ ನಗರದ ಗಣ್ಯರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ರವೀಂದ್ರ ಶಾಬಾದಿ ನೆರವೇರಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಡಾ. ಪದ್ಮರಾಜ ರಾಸಣಗಿ ನಡೆಸಿಕೊಟ್ಟರು. ತ್ರಿವೇಣಿ ಪಾಟೀಲ ವಂದನಾರ್ಪಣೆ ಸಲ್ಲಿಸಿದರು.




