ಕಲಬುರಗಿಜಿಲ್ಲಾಸುದ್ದಿ

ಯೋಗವನ್ನು ದಿನಚರಿಯ ಭಾಗವಾಗಿಸಿಕೊಳ್ಳಿ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಲ್ಲಪ್ಪ ಯಾದವ್ ಕರೆ

ವಿದ್ಯಾ ವಿಕಾಸ ಸ್ವತಂತ್ರ ವಿಜ್ಞಾನ ಪಿಯು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ

ಜೇವರ್ಗಿ: ವಿದ್ಯಾರ್ಥಿಗಳು ಯೋಗವನ್ನು ತಮ್ಮ ದಿನಚರಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ವಿದ್ಯಾ ವಿಕಾಸ ಸ್ವತಂತ್ರ ವಿಜ್ಞಾನ ಪಿಯು ಕಾಲೇಜಿನ ಅಧ್ಯಕ್ಷ ಕಲ್ಲಪ್ಪ ಯಾದವ್ ಅಭಿಪ್ರಾಯಪಟ್ಟರು.

ಪಟ್ಟಣದ ಕೋರ್ಟ್ ಎದುರಿನ ವಿದ್ಯಾ ವಿಕಾಸ ಸ್ವತಂತ್ರ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಲ್ಲಪ್ಪ ಯಾದವ್, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗದ ಮಹತ್ವ ಇನ್ನಷ್ಟು ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯೋಗವು ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ನೆರವಾಗುತ್ತದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಚಟುವಟಿಕೆಗಳನ್ನು ನಡೆಸುವಲ್ಲಿ ವಿದ್ಯಾ ವಿಕಾಸ ಸ್ವತಂತ್ರ ವಿಜ್ಞಾನ ಪಿಯು ಕಾಲೇಜು ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಬಿ, ಶಂಕರ್ ಉಜಳಂಬಿ, ದಾವುದ್ ಇನಾಮದಾರ, ನಿಂಗಣ್ಣಗೌಡ ನಂದಿಹಳ್ಳಿ, ರಫೀಕ್ ಪಟೇಲ್ ಯಾಳವಾರ, ಶರಣು ದೇಸಾಯಿ, ಅರುಣಕುಮಾರ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿ ಯೋಗ ದಿನಾಚರಣೆಗೆ ಮೆರುಗು ತಂದರು.

Show More

Related Articles

Leave a Reply

Your email address will not be published. Required fields are marked *

Back to top button