ಕೆಂಭಾವಿ ಬಳಿ ಕೆಕೆಆರ್ಟಿಸಿ ಬಸ್ ಪಲ್ಟಿ: ಭಾರಿ ಅನಾಹುತ ತಪ್ಪಿದ್ದು, ಪ್ರಯಾಣಿಕರಿಗೆ ಗಾಯ

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸರ್ಕಾರಿ ಬಸ್ಸುಗಳೇ ಜೀವಾಳವಾಗಿವೆ. ಅವುಗಳನ್ನೇ ಅವಲಂಬಿಸಿದ್ದಾರೆ. ಆದರೆ ಸಂಸ್ಥೆಯು ಹಳೆಯ ಡಕೋಟಾ ಬಸ್ಸುಗಳನ್ನು ರಸ್ತೆಗಿಳಿಸಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹೊಸ ಬಸ್ ಸಂಚಾರಿಸ್ಬೇಕು ಶಕ್ತಿ ಯೋಜನೆ ಬಂದಾಗಿಂದ ಲಾಭ ಗಳಿಸುವುದೊಂದೇ ಗುರಿಯಾಗಬಾರದು, ಸುರಕ್ಷತೆಗೂ ಆದ್ಯತೆ ನೀಡಬೇಕು.”- ಆರಿಫ್ ಹುಸೇನ್ ಖಾಜಿ ಪುರಸಭೆ ಸದಸ್ಯರು,ಕೆಂಭಾವಿ.
ಕೆಂಭಾವಿ: ಸಮೀಪದ ಆಲ್ಹಾಳ ಗ್ರಾಮದ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕೆಂಭಾವಿಯಿಂದ ಪೀರಾಪುರ ಮಾರ್ಗವಾಗಿ ತಾಳಿಕೋಟಿ ಕಡೆಗೆ ತೆರಳುತ್ತಿದ್ದ ಕೆಕೆಆರ್ಟಿಸಿ ಬಸ್ ಆಲ್ಹಾಳ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಅಪಘಾತದ ವೇಳೆ ಪ್ರಯಾಣಿಕರು ಆತಂಕಗೊಂಡಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಗಾಯಗೊಂಡ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳನ್ನು ಕೆಂಭಾವಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಅಗತ್ಯವಿದ್ದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.ಘಟನೆಯ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.




