ಕಲಬುರಗಿಜಿಲ್ಲಾಸುದ್ದಿ

ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳ ಪರದಾಟ: ವಿಳಂಬಕ್ಕೆ ಹೊಣೆ ಯಾರು?

ಗ್ರಾಮ ಒನ್ ಕೇಂದ್ರಗಳಲ್ಲಿ ಜನಜಂಗುಳಿ; ಶಿಕ್ಷಣದ ಮೇಲೆ ಬೀರುತ್ತಿದೆ ಪರಿಣಾಮ

ಜೇವರ್ಗಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿ ರುವ ಉಚಿತ ಹಾಗೂ ರಿಯಾಯಿತಿ ಬಸ್ ಪಾಸ್ ಯೋಜನೆಯಲ್ಲೇ ವಿಳಂಬ ಉಂಟಾಗಿದ್ದು, ಜೇವರ್ಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಎದುರಿಸುವಂತಾಗಿದೆ.

ಶಾಲಾ-ಕಾಲೇಜುಗಳು ಆರಂಭವಾಗಿ ಹಲವು ದಿನಗಳು ಕಳೆದರೂ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಬಸ್ ಪಾಸ್ ಲಭ್ಯವಾಗಿಲ್ಲ. ಪ್ರತಿದಿನ ದೂರದ ಊರುಗಳಿಂದ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಹಾಗೂ ಅರ್ಜಿಗಳ ಹೆಚ್ಚಳದಿಂದಾಗಿ ಬಸ್ ಪಾಸ್ ವಿತರಣೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಒಂದೇ ಕೆಲಸಕ್ಕಾಗಿ ಹಲವು ಬಾರಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿದ್ದು, ಸಮಯ ಮತ್ತು ಹಣ ವ್ಯಯವಾಗುತ್ತಿದೆ.

ಬಸ್ ಪಾಸ್ ಸಿಗದ ಕಾರಣ ಹಲವು ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗಿದ್ದು, ಶಿಕ್ಷಣ ಮುಂದುವರಿಸುವುದಕ್ಕೂ ತೊಂದರೆಯಾಗುತ್ತಿದೆ.

ಜೇವರ್ಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದ ಗ್ರಾಮ ಒನ್ ಕೇಂದ್ರದಲ್ಲಿ ವಿವಿಧ ಸೇವೆಗಳಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಕಂಡುಬರುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಮಹಿಳೆಯರು, ವೃದ್ಧರು ಹಾಗೂ ರೈತರು ಕೂಡ ಸೇವೆಗಳಿಗಾಗಿ ಪರದಾಡುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್ ಪಾಸ್ ನೀಡುವಂತೆ ಆಗ್ರಹ

ಬಸ್ ಪಾಸ್ ವಿತರಣಾ ವ್ಯವಸ್ಥೆಯನ್ನು ಸರಳಗೊಳಿಸಿ, ಶಾಲಾ-ಕಾಲೇಜು ಆರಂಭಕ್ಕೂ ಮುನ್ನವೇ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವುದರ ಜೊತೆಗೆ ತಾಂತ್ರಿಕ ತೊಂದರೆಗಳನ್ನು ಶೀಘ್ರ ಪರಿಹರಿಸಿ ಬಾಕಿ ಇರುವ ಬಸ್ ಪಾಸ್‌ಗಳನ್ನು ವಿತರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button