ಕಲಬುರಗಿಜಿಲ್ಲಾಸುದ್ದಿ

ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ 24.1% ಮೀಸಲು ಬೇಡಿಕೆ: ದಸಂಸ ಧರಣಿ

ಕಲಬುರಗಿ: ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ ಶೇಕಡಾ 24.1ರಷ್ಟು ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಮುಖಂಡರು ಮಾತನಾಡಿ, ಸಂವಿಧಾನವು ಸಾಮಾಜಿಕ ನ್ಯಾಯ ತತ್ವವನ್ನು ಮಾನ್ಯ ಮಾಡಿರುವ ಹಿನ್ನೆಲೆ, ರಾಜ್ಯದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 2026–27ರ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ವಿಚಾರವನ್ನೂ ಸ್ಮರಿಸಿದರು.

ಒಳಮೀಸಲಾತಿ ರೋಸ್ಟರ್ ಗೊಂದಲ ನಿವಾರಣೆ ಮಾಡಿ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸಬೇಕು; ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಪೀಠೋಪಕರಣ ಹಾಗೂ ಪಾಠೋಪಕರಣಗಳನ್ನು ಸಮರ್ಪಕವಾಗಿ ಒದಗಿಸಬೇಕು; ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ ಮತ್ತು ದೌರ್ಜನ್ಯ ತಡೆ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ನಿಗಾ ಸಮಿತಿ ರಚಿಸಬೇಕು; ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮೀಸಲು ಇರಿಸಬೇಕು; ಆದಾಯ ಮಿತಿಯನ್ನು ವಾರ್ಷಿಕ 15 ಲಕ್ಷ ರೂ.ಗೆ ಏರಿಸಬೇಕು; ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು; ಎಸ್‌ಸಿ/ಎಸ್‌ಟಿ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, ಫಾರಂ 57 ಅರ್ಜಿದಾರರಿಗೆ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಬೇಕು; ಸಮಾಜ ಕಲ್ಯಾಣ ಇಲಾಖೆಯ ನಿಗಮ ಮಂಡಳಿಗಳಿಂದ ಅರ್ಹರಿಗೆ ಸಾಲ ಮಂಜೂರು ಮಾಡಬೇಕು; ವಸತಿ ಯೋಜನೆಯ ಸಹಾಯಧನವನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು; ನಿರಾಶ್ರಿತರಿಗೆ ನಿವೇಶನ ಹಕ್ಕುಪತ್ರ ನೀಡಬೇಕು; ಡಿ.ಸಿ. ಮನ್ನಾ ಭೂಮಿ ಹಂಚಿಕೆ ಮಾಡಬೇಕು; ಭೂ ಒಡೆತನ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು; ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸುರಕ್ಷಣಾ ಕಾಯ್ದೆ 2020 ರದ್ದುಪಡಿಸಬೇಕು; ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸದಂತೆ ಕ್ರಮ ಕೈಗೊಳ್ಳಬೇಕು; ಕೆಎಸ್‌ಎಫ್‌ಸಿ ಹಾಗೂ ಬ್ಯಾಂಕ್‌ಗಳಿಂದ 4% ಬಡ್ಡಿದರದಲ್ಲಿ ಉದ್ಯಮ ಸಾಲದ ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಮಹಾದೇವ ಕೋಳಕೂರ, ಜಿಲ್ಲಾ ಸಂಚಾಲಕ ರಾಮಣ್ಣ ನೂಲಾ ಮೋಘಾ, ಜಿಲ್ಲಾ ಸಂಚಾಲಕರಾದ ಸಾತಪ್ಪ ಆದ ತೆಗನೂರ, ರಾಜಶೇಖರ ಎಸ್. ಪಡಸಾವಳಿ, ಜಿಲ್ಲಾ ಖಜಾಂಚಿ ನಾಗಪ್ಪ ವಳಕೇರಿ, ತಾಲೂಕು ಸಂಚಾಲಕ ವಿಶ್ವರಾಧ್ಯ ಗಂವ್ಹಾರ, ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಗೌತಮ ಪಾಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button