ಜಿಲ್ಲಾಸುದ್ದಿಗಳು

ಕೆಂಭಾವಿಯಲ್ಲಿ ಪ್ರತ್ಯೇಕ ಪೊಲೀಸ್ ವೃತ್ತ ಸ್ಥಾಪನೆಗೆ ಆಗ್ರಹ

ಕೆಂಭಾವಿ ಠಾಣೆ ಶಹಾಪುರ ವೃತ್ತಕ್ಕೆ ವರ್ಗಾವಣೆ ನಿರ್ಧಾರವನ್ನು ಹಿಂಪಡೆಯದಂತೆ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ, ಆ. 2: ಕೆಂಭಾವಿ ಪೊಲೀಸ್ ಠಾಣೆಯನ್ನು ಶಹಾಪುರ ಪೊಲೀಸ್ ವೃತ್ತದ ವ್ಯಾಪ್ತಿಗೆ ಸೇರಿಸಿರುವ ಸರ್ಕಾರದ ಆದೇಶವನ್ನು ಹಿಂಪಡೆದು, ಕೆಂಭಾವಿಯಲ್ಲಿ ಪ್ರತ್ಯೇಕ ಪೊಲೀಸ್ ವೃತ್ತವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಯಾದಗಿರಿ ಜಿಲ್ಲಾ, ಸುರುಪುರ ತಾಲೂಕು, ಕೆಂಭಾವಿ ಹೋಬಳಿ ಕಾರ್ಮಿಕ ಘಟಕದ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಕೆಂಭಾವಿ ಹೋಬಳಿಯು ಐತಿಹಾಸಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, 100ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಪುರಸಭೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಂಭಾವಿಯು ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.

ಈ ಹಿಂದೆ ಕೆಂಭಾವಿ ಪೊಲೀಸ್ ಠಾಣೆಯು ಹುಣಸಿಗಿ ಪೊಲೀಸ್ ವೃತ್ತದ ವ್ಯಾಪ್ತಿಯಲ್ಲಿದ್ದು, ಸಾರ್ವಜನಿಕರು ಕೇವಲ 25 ಕಿಲೋಮೀಟರ್ ದೂರ ಪ್ರಯಾಣಿಸಿ ಸೇವೆ ಪಡೆಯುತ್ತಿದ್ದರು. ಆದರೆ, ಶಹಾಪುರ ಪೊಲೀಸ್ ವೃತ್ತಕ್ಕೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಸುಮಾರು 45 ಕಿಲೋಮೀಟರ್ ದೂರ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಈ ಬದಲಾವಣೆಯಿಂದ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಪೊಲೀಸ್ ಇಲಾಖೆಯ ಸೇವೆ ಪಡೆಯಲು ಅನಗತ್ಯ ಸಮಯ ಹಾಗೂ ಹಣ ವ್ಯಯಿಸಬೇಕಾಗುತ್ತಿದ್ದು, ಹಲವು ಸಂದರ್ಭಗಳಲ್ಲಿ ಒಂದು ದಿನವನ್ನೇ ಮೀಸಲಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಕೆಂಭಾವಿಯಲ್ಲಿ ಈಗಾಗಲೇ ಪೊಲೀಸ್ ಠಾಣೆ ಹಾಗೂ ಅಗತ್ಯ ಮೂಲಸೌಕರ್ಯಗಳು ಲಭ್ಯವಿರುವುದರಿಂದ, ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಪ್ರತ್ಯೇಕ ಪೊಲೀಸ್ ವೃತ್ತವನ್ನು ಸ್ಥಾಪಿಸಿ, ಶಹಾಪುರ ಪೊಲೀಸ್ ವೃತ್ತಕ್ಕೆ ಸೇರ್ಪಡೆಗೊಳಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಕೆಂಭಾವಿ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಅಂಗಡಿ, ಸಾಮಾಜಿಕ ಹೋರಾಟಗಾರ ರಂಗಣ್ಣ ಕಂದಿಲ್, ಸೋಮನಾಥ ಕೊರಳ್ಳಿ, ಕೃಷ್ಣಜಿ ವಾಸ್ಠರ, ಮಂಜುನಾಥ ಕಾವಲ್ದಾರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button