ವಧು-ವರರ ಸಮಾವೇಶ ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಿ: ಅಲ್ಲಮಪ್ರಭು ಪಾಟೀಲ

ಕಲಬುರಗಿ: ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಮದುವೆ ಸಂಬಂಧಗಳನ್ನು ನಿಶ್ಚಯಿಸುವುದು ಕಷ್ಟಕರವಾಗಿದ್ದು, ಯುವಕರು ಇಂತಹ ವಧು-ವರರ ಸಮಾವೇಶಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಜಗತ್ ಬಡಾವಣೆಯ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಆವರಣದಲ್ಲಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಧು-ವರರ ಸಮಾವೇಶ–2026 ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಇಂತಹ ಸಮಾವೇಶಗಳು ಉತ್ತಮ ವೇದಿಕೆಯಾಗಿವೆ. ಪರಸ್ಪರ ಪರಿಚಯ ಹಾಗೂ ವಿಚಾರ ವಿನಿಮಯದ ಮೂಲಕ ಕುಟುಂಬದ ಒಪ್ಪಿಗೆಯೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲಘಟಗಿಯ ಪೂಜ್ಯ ಗುರುಮಾತಾ ನಂದಾತಾಯಿ ಹಾಗೂ ಕಲಬುರಗಿಯ ಮಾತಾ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಮಾತೋಶ್ರೀ ಪ್ರಭುಶ್ರೀ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸಾಯಿಬಣ್ಣ ಮಸಾಜಿ ಹೋಳಕರ್ ಅಧ್ಯಕ್ಷತೆ ವಹಿಸಿದ್ದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಉಮರ್ಗಾ ಮಾಜಿ ಶಾಸಕ ಜ್ಞಾನದೆವ್ ಚೌಗಲೇ, ಲಾತೂರ ಮಾಜಿ ಶಾಸಕ ಧರ್ಮಾಜಿ ಗಿರಿಜಪ್ಪ ಸೋನಕವಡೆ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಹಲವು ಗಣ್ಯರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದಲೂ ನೂರಾರು ವಧು-ವರರು ಪಾಲ್ಗೊಂಡು ಪರಸ್ಪರ ಪರಿಚಯ ಮಾಡಿಕೊಂಡರು. ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸಮಾವೇಶ ಸಹಕಾರಿಯಾಯಿತು.



