ಜಿಲ್ಲಾಸುದ್ದಿಗಳು

ಆ. 15ರಿಂದ VB-G RAM G’ ಯೋಜನೆ ಬಹಿಷ್ಕಾರಕ್ಕೆ ಪಿಡಿಓಗಳ ನಿರ್ಧಾರ

ಕಲಬುರಗಿ, ಆ. 11:‘VB-G RAM G’ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಮೇಲೆ ಅತಿಯಾದ, ಅವೈಜ್ಞಾನಿಕ ಹಾಗೂ ನಿಯಮಬಾಹಿರ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘವು, ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಆಗಸ್ಟ್ 15ರಿಂದ ಯೋಜನೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಈ ಕುರಿತು ಸಚಿವರ ಕಚೇರಿ, ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಪಿಡಿಓಗಳ ಸಮಸ್ಯೆಗಳನ್ನು ತರಲಾಗಿದೆ. ಆದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘಟಿತ ಪ್ರತಿಭಟನೆಗೆ ಮುಂದಾಗಲಾಗಿದೆ ಎಂದು ಸಂಘದ ರಾಜ್ಯ ನಿರ್ದೇಶಕಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಹು ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಏಕರೂಪದ ಮಾರ್ಗಸೂಚಿ (ಎಸ್‌ಒಪಿ) ಇಲ್ಲದಿರುವುದು, ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಗತ್ಯ ವಿನಾಯಿತಿ ಆದೇಶ ನೀಡದಿರುವುದು ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನ ರೀತಿಯ ಮಾಹಿತಿ ನೀಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಂಘ ಆರೋಪಿಸಿದೆ.

ಅನುಮೋದಿತ ಕ್ರಿಯಾಯೋಜನೆ ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕಾಮಗಾರಿಗಳನ್ನು ಆರಂಭಿಸುವಂತೆ ಪಿಡಿಓಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಇತರ ಇಲಾಖೆಗಳ ಕಾಮಗಾರಿಗಳ ತಾಂತ್ರಿಕ ಮಾಹಿತಿ ಮತ್ತು ಮೌಲ್ಯಮಾಪನ ಪಿಡಿಓಗಳಿಗೆ ಲಭ್ಯವಿಲ್ಲದಿದ್ದರೂ, ಅವುಗಳ ಬಿಲ್‌ಗಳ ಪಾವತಿ ಹೊಣೆಯನ್ನು ಪಿಡಿಓಗಳ ಮೇಲೆ ಹೊರಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕಾನೂನು ಹಾಗೂ ಆರ್ಥಿಕ ಸಮಸ್ಯೆಗಳಿಗೆ ಪಿಡಿಓಗಳೇ ಹೊಣೆಗಾರರಾಗುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ನೈಜ ಬೇಡಿಕೆ ಇಲ್ಲದಿದ್ದರೂ ಕೃತಕ ಓಒಖ ತೆಗೆದುಕೊಳ್ಳುವಂತೆ ಒತ್ತಾಯಿಸುವುದು, ಕಚೇರಿ ಸಮಯದ ಬಳಿಕ ರಾತ್ರಿ ಸಭೆ ನಡೆಸುವುದು, ಶೋಕಾಸ್ ನೋಟಿಸ್ ನೀಡುವುದು ಹಾಗೂ ಅಮಾನತು ಸೇರಿದಂತೆ ವಿವಿಧ ರೀತಿಯ ಕ್ರಮಗಳ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ಪಿಡಿಓಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸಂಘ ದೂರಿದೆ.

ಸಂಘದ ಪ್ರಮುಖ ಬೇಡಿಕೆಗಳು

ಯೋಜನೆಗೆ ತಕ್ಷಣ ಏಕರೂಪದ ಸ್ಪಷ್ಟ ಎಸ್‌ಒಪಿ ಬಿಡುಗಡೆ ಮಾಡಬೇಕು. ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಧಿಕೃತ ವಿನಾಯಿತಿ ನೀಡಬೇಕು. ಕ್ರಿಯಾಯೋಜನೆ ಹಾಗೂ ಟೆಂಡರ್ ಇಲ್ಲದೆ ಕಾಮಗಾರಿ ಕೈಗೊಳ್ಳುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಇತರ ಇಲಾಖೆಗಳ ತಾಂತ್ರಿಕ ಮಾಹಿತಿ ಇಲ್ಲದ ಕಾಮಗಾರಿಗಳ ಬಿಲ್ ಪಾವತಿ ಹೊಣೆಯನ್ನು ಪಿಡಿಓಗಳ ಮೇಲೆ ಹೊರಿಸುವ ಆದೇಶವನ್ನು ಹಿಂಪಡೆಯಬೇಕು ಎಂದು ಸಂಘ ಒತ್ತಾಯಿಸಿದೆ.

ಅಲ್ಲದೆ, ಕೃತಕ ಓಒಖ, ಅವೈಜ್ಞಾನಿಕ ಗುರಿ ನಿಗದಿ, ಅಮಾನತು ಬೆದರಿಕೆ, ಶೋಕಾಸ್ ನೋಟಿಸ್ ಹಾಗೂ ರಾತ್ರಿ ವೇಳೆಯ ಅನಗತ್ಯ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಆ. 15ರವರೆಗೆ ಗಡುವು

2026ರ ಆಗಸ್ಟ್ 15ರೊಳಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯದಿದ್ದರೆ ರಾಜ್ಯಾದ್ಯಂತ ಯಾವುದೇ ಓಒಖ ತೆಗೆದುಕೊಳ್ಳದೆ, ಯೋಜನೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸದೆ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

‘ಜನರಿಗೆ ಉದ್ಯೋಗ ನೀಡುವ ಸರ್ಕಾರದ ಆಶಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ತಾಂತ್ರಿಕ ಮಾಹಿತಿ ಇಲ್ಲದ ಇತರ ಇಲಾಖೆಗಳ ಬಿಲ್‌ಗಳ ಪಾವತಿ, ಕ್ರಿಯಾಯೋಜನೆ ಇಲ್ಲದೆ ಕಾಮಗಾರಿ ನಡೆಸಲು ಒತ್ತಡ ಹಾಗೂ ನಿಯಮಬಾಹಿರವಾಗಿ ಪಿಡಿಓಗಳ ಮೇಲೆ ಹೊಣೆಗಾರಿಕೆ ಹೊರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರಾಜೇಶ್ವರಿ ಸಾಹು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button