ಜಿಲ್ಲಾಸುದ್ದಿಗಳು

ದಾಸ ಸಾಹಿತ್ಯ ಇಂದಿನ ಸಮಾಜಕ್ಕೆ ದಾರಿದೀಪ: ಡಾ. ಸುರೇಶ ಎಲ್. ಜಾಧವ

ಕಲಬುರಗಿ, ಆ.6: ದಾಸ ಸಾಹಿತ್ಯವು ಅಂತರಾತ್ಮವನ್ನು ಶುದ್ಧಿಗೊಳಿಸಿ ಮೋಕ್ಷದತ್ತ ಕೊಂಡೊಯ್ಯುವ ಆಧ್ಯಾತ್ಮಿಕ ಸಾಹಿತ್ಯವಾಗಿದ್ದು, ಅದರ ನಿಜ ಸಾರ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಕಲಬುರಗಿ ವಿಭಾಗದ ನಾಲ್ಕನೇ ದಾಸ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ. ಸುರೇಶ ಎಲ್. ಜಾಧವ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ದಕ್ಷಿಣ ವಲಯದ ಆಶ್ರಯದಲ್ಲಿ ಆ.9ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ನೀಡಿದ ಅಧಿಕೃತ ಆಹ್ವಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ದಾಸರು ತಮ್ಮ ಪದಗಳ ಮೂಲಕ ಧ್ಯಾನ, ತಪಸ್ಸು, ಜೀವನ ಪರಿಶುದ್ಧತೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಪರಿವರ್ತನೆಗೆ ಮುನ್ನುಡಿ ಬರೆದಿದ್ದಾರೆ. ಇಂತಹ ದಾಸ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು.

ಜಾತ್ಯತೀತ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಪರಿಷತ್ತನ್ನೂ ಅದೇ ಮೌಲ್ಯಗಳ ಆಧಾರದ ಮೇಲೆ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದು ಡಾ. ಜಾಧವ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ದಾಸ ಸಾಹಿತ್ಯವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಸಮಾನತೆ, ಮಾನವೀಯತೆ ಮತ್ತು ಭಕ್ತಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಜನಪರ ಸಾಹಿತ್ಯವಾಗಿದೆ. ಕನಕದಾಸರು, ಪುರಂದರದಾಸರು ಸೇರಿದಂತೆ ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ ಎಂದು ಹೇಳಿದರು.

ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಕನ್ನಡ ನಾಡಿನ ಸಾಂಸ್ಕೃತಿಕ ಸಂಪತ್ತಾಗಿದ್ದು, ಅವುಗಳ ಸಾರವನ್ನು ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮೇಶ ಚಿಚಕೋಟೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ, ಸುರೇಖಾ ಎಸ್. ಜಾಧವ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ರೇವಣಸಿದ್ದಪ್ಪ ಬೋಗಶೆಟ್ಟಿ, ಹಣಮಂತರಾವ ನಾಗಶೆಟ್ಟಿ ಪಾಟೀಲ, ಶರಣಗೌಡ ಮಾಲಿಪಾಟೀಲ, ಶಿವಶರಣಪ್ಪ ಬಿರಾದಾರ, ಡಾ. ಲಿಂಗರಾಜ ಸಿರಗಾಪೂರ, ಡಾ. ಶೋಭಾದೇವಿ ಚೆಕ್ಕಿ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಮಲ್ಲಿನಾಥ ಸಂಗಶೆಟ್ಟಿ, ಗಂಗಾಧರ ಬಂಗರಗಿ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಶಿವಲಿಂಗಪ್ಪ ಪಾಟೀಲ, ಮಧುಸೂಧನ ಚಿಂತನಪಳ್ಳಿ, ಸಂಗಪ್ಪ ಭೀಮಳ್ಳಿ, ಚಂದ್ರಕಾಂತ ಸೂರನ್, ಅಮೃತಪ್ಪ ಅಣೂರ, ಸೋಮಶೇಖರ ನಂದಿಧ್ವಜ, ಮಹಾಲಿಂಗಯ್ಯ ಸ್ವಾಮಿ, ರಾಜಶೇಖರ ಚಿಂಚೋಳಿ, ಪರಮಾನಂದ ಸರಸಂಬಿ, ಮಂಜುನಾಥ ಕಂಬಾಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button