ಸೌಹಾರ್ದತೆಯ ಸಂಕೇತ ಕೆಂಭಾವಿ ಪುರಸಭೆ ಅಧ್ಯಕ್ಷೆಗೆ ಮುಸ್ಲಿಂ ಬಾಂಧವರಿಂದ ಸನ್ಮಾನ

ಕೆಂಭಾವಿ: ಸುರಪುರ ತಾಲೂಕಿನ ಕೆಂಭಾವಿ ಪುರಸಭೆಯ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಶ್ರೀಮತಿ ಗಿರಿಜಾ ರಮೇಶ್ ಕೊಡಗಾನೂರ ಅವರಿಗೆ ಪಟ್ಟಣದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಯುವಕರು ಸನ್ಮಾನಿಸಿ ಶುಭ ಹಾರೈಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ನೂತನ ಅಧ್ಯಕ್ಷೆಯ ಪರವಾಗಿ ಅವರ ಪತಿ ರಮೇಶ್ ಕೊಡಗಾನೂರ ಅವರಿಗೆ ಹೂಗುಚ್ಚ ನೀಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದರು.
ಎಲ್ಲ ಧರ್ಮ ಹಾಗೂ ಜಾತಿಯ ಜನರನ್ನು ಸಮಾನವಾಗಿ ಪರಿಗಣಿಸಿ ಜನಪರ ಆಡಳಿತ ನಡೆಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಕೊಡಗಾನೂರ, ಅಧ್ಯಕ್ಷೆಯ ಅಧಿಕಾರಾವಧಿಯಲ್ಲಿ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪಟ್ಟಣದ ಅಭಿವೃದ್ಧಿಗೆ ಎಲ್ಲ ಸಮುದಾಯಗಳ ಸಹಕಾರ ಅತ್ಯಗತ್ಯವಾಗಿದ್ದು, ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕೆಂಭಾವಿ ಪುರಸಭೆಯನ್ನು ಮಾದರಿ ಸ್ಥಳೀಯ ಸಂಸ್ಥೆಯಾಗಿ ರೂಪಿಸಲು ಎಲ್ಲ ವರ್ಗದ ಜನರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು. ಕಾರ್ಯಕ್ರಮವು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯದ ಸಂದೇಶ ಸಾರುವ ವೇದಿಕೆಯಾಗಿತ್ತು.



