ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿಗಳು

ಹಿಂದುಳಿದ ವರ್ಗ, ಮಹಿಳೆಯರನ್ನು ಕಡೆಗಣಿಸಿದ ಸರ್ಕಾರ: ಅವ್ವಣ್ಣ ಮ್ಯಾಕೇರಿ ಕಿಡಿ

ಮಂಕಾಳ ವೈದ್ಯ, ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿ ಆಗ್ರಹ

ಕಲಬುರಗಿ:ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ನೀಡದೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿ, ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿತು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು ಹಾಗೂ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಶಾಸಕ ಮಂಕಾಳ ವೈದ್ಯ ಮತ್ತು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಲ್ಲಿ ಪ್ರಸ್ತಾಪವಾಗಿ ಬಳಿಕ ಕೈಬಿಡಲಾಗಿದೆ ಎಂಬುದು ಹಿಂದುಳಿದ ವರ್ಗ ಮತ್ತು ಮಹಿಳಾ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಕೋಲಿ-ಕಬ್ಬಲಿಗ ಸಮುದಾಯವು ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ರಾಜಕೀಯ ಪಾತ್ರ ವಹಿಸುತ್ತಿದ್ದು, ಹಿಂದಿನ ಸರ್ಕಾರಗಳಲ್ಲಿ ಈ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ನಿರಂತರವಾಗಿ ಪ್ರಾತಿನಿಧ್ಯ ದೊರೆತ ಇತಿಹಾಸವಿದೆ. ಈ ಬಾರಿ ಸಮುದಾಯದ ಪ್ರತಿನಿಧಿಯಾಗಿರುವ ಶಾಸಕ ಮಂಕಾಳ ವೈದ್ಯ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಬಾಬುರಾವ ಚಿಂಚನಸೂರ ಅವರಿಗೆ ಸಚಿವ ಸ್ಥಾನದಿಂದ ವಂಚನೆ ಆಗಿದ್ದರೂ, ಈಗಲೂ ಅದೇ ರೀತಿಯ ನಿರ್ಲಕ್ಷ್ಯ ಮುಂದುವರಿದಿದೆ. ಸರ್ಕಾರ ಕೂಡಲೇ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ ಹಾಗೂ ಮಹಿಳೆಯರ ಕಲ್ಯಾಣದ ಬಗ್ಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಅವಕಾಶ ನೀಡದಿರುವುದು ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.

ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಕುರುಬ ಸಮುದಾಯ ಹಾಗೂ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ಸರ್ಕಾರ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಿ ಹಿಂದುಳಿದ ವರ್ಗ ಮತ್ತು ಮಹಿಳೆಯರ ಗೌರವವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಹಿಂದುಳಿದ ವರ್ಗ ಹಾಗೂ ಮಹಿಳಾ ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಸಪ್ಪಣಗೋಳ, ಬಸವರಾಜ ಬೂದಿಹಾಳ, ಶಾಂತಪ್ಪ ಕೂಡಿ, ಪ್ರೇಮ್ ಕೋಳಿ, ಚಂದ್ರಕಾಂತ ಕಿರಸಾವಳಗಿ, ಬಸವರಾಜ ಗುಂಡಲಗೇರಿ, ಪ್ರವೀಣ ಜಮಾದಾರ, ಸಂತೋಷ ತಳವಾರ, ಬೆಳ್ಳಪ್ಪ ಇಂಗನಕಲ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button