ಉದನೂರ ಪ್ರಿಮಿಯರ್ ಲೀಗ್: ದತ್ತಾ ಸ್ಪೋರ್ಟ್ಸ್‌ಗೆ ಚಾಂಪಿಯನ್ ಪಟ್ಟ

ಕಲಬುರಗಿ: ಗ್ರಾಮೀಣ ಯುವ ಪ್ರತಿಭೆಗಳಿಗೆ ಕ್ರೀಡಾ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಉದನೂರ ಪ್ರಿಮಿಯರ್ ಲೀಗ್ (ಯುಪಿಎಲ್) ಸೀಸನ್–1 ಕ್ರಿಕೆಟ್ ಟೂರ್ನಿಯು ಭಾನುವಾರ ಅದ್ಧೂರಿಯಾಗಿ ಸಮಾರೋಪಗೊಂಡಿತು. ಎರಡು ವಾರಗಳ ಕಾಲ ನಡೆದ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡು ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳ ರಸದೌತಣ ನೀಡಿದವು.
ಕಲಬುರಗಿ ತಾಲ್ಲೂಕಿನ ಉದನೂರ ಗ್ರಾಮದ ಹೊರವಲಯದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದತ್ತಾ ಸ್ಪೋರ್ಟ್ಸ್ ಮತ್ತು 11 ಸ್ಟಾರ್ ತಂಡಗಳು ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ದತ್ತಾ ಸ್ಪೋರ್ಟ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 138 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ 11 ಸ್ಟಾರ್ ತಂಡ ಉತ್ತಮ ಹೋರಾಟ ನಡೆಸಿದರೂ 102 ರನ್‌ಗಳಿಗೆ ಸೀಮಿತವಾಗಿ ಸೋಲನುಭವಿಸಿತು.
ವಿಜೇತ ದತ್ತಾ ಸ್ಪೋರ್ಟ್ಸ್ ತಂಡ ಟ್ರೋಫಿಯೊಂದಿಗೆ ₹50 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ತಂಡದ ನಾಯಕ ಶರಣು ಅವರು ಸಹ ಆಟಗಾರರೊಂದಿಗೆ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಅವರಿಂದ ಟ್ರೋಫಿ ಹಾಗೂ ಬಹುಮಾನ ಸ್ವೀಕರಿಸಿದರು. ರನ್ನರ್-ಅಪ್ ಸ್ಥಾನ ಪಡೆದ 11 ಸ್ಟಾರ್ ತಂಡದ ನಾಯಕ ಶಾಂತು ಪೂಜಾರಿ ಟ್ರೋಫಿ ಮತ್ತು ನಗದು ಬಹುಮಾನ ಪಡೆದರು.
ಟೂರ್ನಿಯ ವೈಯಕ್ತಿಕ ಪ್ರಶಸ್ತಿಗಳಲ್ಲಿ ಆಕಾಶ್ ಅವರು ‘ಬೆಸ್ಟ್ ಬ್ಯಾಟ್ಸ್‌ಮನ್’ ಹಾಗೂ ವೆಂಕಟೇಶ್ ಜೂಲಪಿ ಅವರು ‘ಬೆಸ್ಟ್ ಬೌಲರ್’ ಪ್ರಶಸ್ತಿಗೆ ಭಾಜನರಾದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕೃಷ್ಣಾ ರೆಡ್ಡಿ, ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಯುಪಿಎಲ್ ಟೂರ್ನಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
‘ಕ್ರೀಡೆಯು ಯುವಕರಲ್ಲಿ ದೈಹಿಕ ಸದೃಢತೆಯ ಜೊತೆಗೆ ಶಿಸ್ತು, ತಂಡದ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಟೂರ್ನಿಯನ್ನು ಆಯೋಜಿಸುವ ಯೋಜನೆ ಇದೆ’ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಪ್ ಪಾಟೀಲ್ ಜೀವಣಗಿ, ಜೈಭೀಮ ಕೊರಳ್ಳಿ, ರಾಣಪ್ಪ ಕೊರಳ್ಳಿ, ಸುಶೀಲ ಕೊರಳ್ಳಿ, ಅನಿಲ್ ಚೌವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಟೂರ್ನಿಯ ಯಶಸ್ಸಿಗೆ ಸಾಕ್ಷಿಯಾದರು.



