ಕೋರ್ಟ್ ಬಳಿ ಬೀದಿ ವ್ಯಾಪಾರಿಗಳಿಗೆ ಉಚಿತ ಕನ್ನಡಕ ವಿತರಣೆ

ಕಲಬುರಗಿ, ಆ.14: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಲಂ ಜನರ ಸಂಘಟನೆ ಕರ್ನಾಟಕ–ಕಲಬುರಗಿ ಜಿಲ್ಲಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಕೋರ್ಟ್ ಸಮೀಪದ ಬುದ್ಧ ಬಸವ ಅಂಬೇಡ್ಕರ್ ಕಂಪ್ಯೂಟರ್ ಬೆರಳಚ್ಚುಗಾರರ ಹಾಗೂ ಜೆರಾಕ್ಸ್ ಸಣ್ಣಪುಟ್ಟ ವ್ಯಾಪಾರಿಗಳ ಸಂಘದ ಕಚೇರಿ ಬಳಿ ಬೀದಿ ವ್ಯಾಪಾರಿಗಳಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ರವಿಕಾಂತ್ ಎಸ್. ಕ್ಯಾತನಾಳ ಉದ್ಘಾಟಿಸಿದರು. ಮಹಾನಗರ ಪಾಲಿಕೆಯ ಉಪ ಮಹಾಪೌರ ತೃಪ್ತಿ ಶ್ರೀನಿವಾಸ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸ್ಲಂ ಜನರ ಸಂಘಟನೆ ಗೌರವ ಅಧ್ಯಕ್ಷ ಬಾಬುರಾವ್ ದಂಡಿನಕರ್, ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿ ವಿಕಾಸ್ ಸಾವರ್ಕರ್, ಮಲ್ಲಿಕಾರ್ಜುನ ಬೈರಾಮಡಗಿ, ಕವಿತಾ ಮಾಶಾಕರ್, ಅವಿನಾಶ್ ಗೌಡ, ಸುನೀಲ್ ರಾಠೋಡ್, ಬ್ರಹ್ಮಾನಂದ ಮಿಂಚಾ, ಗಣೇಶ್ ಕಾಂಬಳೆ, ವಸಂತ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೇತ್ರ ತಜ್ಞರಾದ ಶ್ರೀ ಧನಶ್ಯಾಮ್ ಹಾಗೂ ಶ್ರೀ ಗುರುಶಾಂತ್ ಅವರು ಬೀದಿ ವ್ಯಾಪಾರಿಗಳ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಉಚಿತ ಕನ್ನಡಕಗಳನ್ನು ವಿತರಿಸಿದರು.
ಒಟ್ಟು 166 ಜನರ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ಅಗತ್ಯವಿದ್ದ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಬೀದಿ ವ್ಯಾಪಾರಿಗಳಿಗೆ ಇಂತಹ ಆರೋಗ್ಯ ಸೇವಾ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ಮುಂದೆಯೂ ಇಂತಹ ಸೇವಾ ಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.